Tuesday, December 25, 2012

’ಚಿಲ್ಲರೆ’ ವ್ಯವಹಾರ


ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ’ಚಿಲ್ಲರೆ ವ್ಯಾಪಾರದಲ್ಲಿ ನೇರ ವಿದೇಶೀ ಹೂಡಿಕೆ’ (ಎಫ್ ಡಿ ಐ) ಬಗ್ಗೆ ನಡೆಯುತ್ತಿದ್ದ ಚರ್ಚೆಯನ್ನು ನಾವೆಲ್ಲಾ ಟಿವಿಯಲ್ಲಿ ನೋಡಿದ್ದೇವೆ. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಪ್ರತಿಯೊಂದು ಪಕ್ಷವೂ ತನ್ನದೇ ಆದ ಸಿದ್ಧಾಂತದ ಆಧಾರದ ಮೇಲೆ ಸದನದಲ್ಲಿ ತನ್ನ ವಾದವನ್ನು ಮಂಡಿಸುವುದನ್ನು ನಾವು ವರ್ಷಗಳಿಂದ ಕಂಡಿದ್ದೇವೆ. ಇಲ್ಲಿ ಪಕ್ಷವೊಂದರ ವಾದ ನಮಗೆ ಸರಿ ಕಾಣದಿದ್ದರೆ ಅದು ಕೇವಲ ಅಭಿಪ್ರಾಯ ಬೇಧ ಮತ್ತು ಅದು ಸಹಜ ಕೂಡ. ಆದರೆ ನಾವು ಈ ಬಾರಿ ನೋಡಿದ್ದು ಇದಕ್ಕಿಂತ ಭಿನ್ನವಾದ ಚರ್ಚೆಯನ್ನು. ಇಲ್ಲಿ ಕೆಲವು ಪಕ್ಷಗಳು ತಮ್ಮ ಸಿದ್ಧಾಂತ (?) ವನ್ನು ಮಂಡಿಸಿದ್ದು ಸದನದಾಚೆ ನಡೆದ ವ್ಯವಹಾರದ ಮೇಲೆ ಎಂಬುದು ನಮ್ಮ ದುರ್ದೈವ. ಆ ಪಕ್ಷಗಳಿಗೆ ತಾವು ನಂಬಿದ ಸಿದ್ಧಾಂತ ಮತ್ತು ತಮ್ಮನ್ನು ನಂಬಿದ ಜನರಿಗಿಂತ ತಮ್ಮ ಇತರ ವ್ಯವಹಾರಗಳು ಪ್ರಮುಖ ಎಂದೆನಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದರೆ ಹೆಚ್ಚಾಗದು. ಒಂದು ಪಕ್ಷವಂತೂ ಚರ್ಚೆಯಲ್ಲಿ ಎಫ್ ಡಿ ಐ ವಿರೋಧಿಸಿ ಕೊನೆಗೆ ಮತದಾನದ ಸಂದರ್ಭದಲ್ಲಿ ಸದನದಿಂದ ಹೊರಗುಳಿದು ತನ್ನನ್ನೇ ತಾನು ಅಣಕವಾಡಿಕೊಂಡಿತು. ಸರಕಾರವೂ ಹೇಗಾದರೂ ಸರಿ, ಎಫ್ ಡಿ ಐ ಜಾರಿಗೆ ತರಲೇಬೇಕೆಂಬ ಧೋರಣೆಯೊಂದಿಗೆ ಈ ಪಕ್ಷಗಳನ್ನು ’ಚಿಲ್ಲರೆ’ ವ್ಯವಹಾರಕ್ಕೆ ಪ್ರೇರೇಪಿಸಿದ್ದು ಸರಕಾರಕ್ಕಾದ ನೈತಿಕ ಸೋಲಲ್ಲದೆ ಮತ್ತೇನಲ್ಲ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ನೇರ  ಪರಿಣಾಮ ಬೀರುವ ಇಂತಹ ಮಹತ್ವ ಪೂರ್ಣ ಮಸೂದೆಯ ವಿಷಯದಲ್ಲಿ ಸರಕಾರ ಮತ್ತು ಇತರ ಕೆಲವು ಪಕ್ಷಗಳು ನಡೆದ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಫಲತೆ ಎಂದರೆ ತಪ್ಪಾಗದು.

Monday, June 25, 2012

ಸರ್ವೇಜನಾಃ ಸುಖಿನೋ ಭವಂತು ಎಂದರೆ ಕೇಸರೀಕರಣವೇ?

ಕೆಲವು ದಿನಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಬರುತ್ತಿರುವ ’ಕೇಸರಿ ಕಲಹ’ದಲ್ಲಿ ಗಣ್ಯರ ಅಭಿಪ್ರಾಯಗಳನ್ನು ಓದಿದಾಗ ಪ್ರತಿಕ್ರಿಯಿಸಬೇಕು ಎಂದೆನಿಸಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತಿ ಮತ್ತು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿ ನೋಡಿದ ಉದಾಹರಣೆಗಳು ಬಹಳ ಕಡಿಮೆ. ಇದರ ಭಾಗವೇ ಕೇಸರೀಕರಣದ ಪರ ಮತ್ತು ವಿರೋಧ ಚರ್ಚೆ. ಈ ನಿಟ್ಟಿನಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಮ್ಮ ರಾಜಕಾರಣೆಗಳಿಗೆ ಕೇಳಬಯಸುತ್ತೇನೆ.
·    ಮೊದಲನೆಯದಾಗಿ, ಹಸಿರು ಎಂದರೆ ಗಿಡ, ಮರ, ಪರಿಸರವನ್ನು ನೆನಪಿಸಿಕೊಳ್ಳುವ ನೀವು ಕೇಸರಿ ಎಂದಾಕ್ಷಣ ಸಂಕುಚಿತ ಮನೋಭಾವದವರಾಗುವುದೇಕೆ ಮತ್ತು ಪೂರ್ವಾಗ್ರಹ ಪೀಡಿತರಂತೆ ವರ್ತಿಸುವುದೇಕೆ? ಅಷ್ಟಕ್ಕೂ ಕೇಸರಿಗೆ ಕೇವಲ ಧರ್ಮವೊಂದನ್ನು ಹೊಂದಿಸಿ ನೋಡುವ ನಿಮ್ಮ ಮನೋಧರ್ಮ ಸರಿಯೇ?
·      ಸರ್ವೇಜನಾಃ ಸುಖಿನೋ ಭವಂತು ಮತ್ತು ವಸುಧೈವ ಕುಟುಂಬಕಂ ಎಂಬ ಉಕ್ತಿಗಳ ಅರ್ಥವಾದರೂ ನಿಮಗೆ ತಿಳಿದಿದೆಯೇ? ಸಮಸ್ತರಿಗೆ ಸುಖ ಮತ್ತು ಶಾಂತಿ ಸಿಗಲಿ ಎಂಬುದು ನಿಮ್ಮ ಪ್ರಕಾರ ಸಂಕುಚಿತ ಮನಸ್ಥಿತಿಯಾದರೆ, ವಿಶಾಲ ಮನಸ್ಸು ಎಂದರೆ ಏನು ಎಂದು ತಿಳಿಸುವಿರಾ?
· ಸಮಾನತೆಯೇ ನಿಮ್ಮ ಗುರಿಯಾದರೆ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತಿರುವುದೇಕೆ? ಅಲ್ಪಸಂಖ್ಯಾತರೆಂದು ಕೆಲವು ವರ್ಗಕ್ಕೆ ವಿಶೇಷ ಸೌಲಭ್ಯ ನೀಡುವುದು ಸರಿಯೇ?
·  ಸಮಾಜದ ಒಂದು ವರ್ಗಕ್ಕೆ ನೋವಾಗುತ್ತದೆ ಎಂದು ಐತಿಹಾಸಿಕ ಸತ್ಯಗಳನ್ನೇ ತಿರುಚುವುದು ಸರಿಯೇ?
ನಮ್ಮಲ್ಲಿನ ಎಲ್ಲಾ ರಾಜಕೀಯ ಪಕ್ಷಗಳೂ ಜಾತಿ ಮತ್ತು ಧರ್ಮವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿವೆಯೇ ಹೊರತು ಅವರ ಮೇಲಿನ ನೈಜ ಕಾಳಜಿಯಿಂದಲ್ಲ. ಸಮಾಜದಲ್ಲಿ ಒಡಕು ಮೂಡಿಸುವ ಮೂಲಕ ತಮ್ಮ ಕಾರ್ಯ ಸಾಧಿಸುವ ರಾಜಕಾರಣಿಗಳ ಆಟವನ್ನು ತಿಳಿಯದಷ್ಟು ದಡ್ಡರಲ್ಲ ನಮ್ಮ ಜನ.

Sunday, June 24, 2012

ರಾಜಕೀಯ


ಕಾನೂನು ಸಚಿವ ಸುರೇಶ್ ಕುಮಾರ್ ಮೇಲಿನ ಆರೋಪ ಮತ್ತು ಅವರ ರಾಜೀನಾಮೆ ಕರ್ನಾಟಕ ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ.
ಗಂಧದ ಗುಡಿ, ಶಿಲ್ಪಕಲೆಯ ತವರೂರು ಎಂಬೆಲ್ಲಾ ವಿಶೇಷಣಗಳಿಂದ ಕರೆಸಿಕೊಳ್ಳುತ್ತಿದ್ದ ನಮ್ಮ ನಾಡು ಇಂದು ರಾಜಕೀಯ ಗೊಂದಲಗಳ ಗೂಡು. ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾದುದನ್ನು ನಾವು ಕಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಹಿರಿಯರು ರಾಜ್ಯಕ್ಕೆ ತಂದು ಕೊಟ್ಟ ಎಲ್ಲಾ ಗೌರವವನ್ನು ಮಣ್ಣುಪಾಲಾಗಿಸಿದೆ. ಗಣಿಯ ಧೂಳು ಎಷ್ಟು ತೊಳೆದರೂ ಹೋಗುತ್ತಿಲ್ಲ. ಮಕ್ಕಳಿಗೆ ಸಿಹಿತಿಂಡಿ ಹಂಚಿದಂತೆ ರಾಜಕಾರಣಿಗಳಿಗೆ ಸೈಟ್ ಹಂಚಿಕೆಯಾಗಿದೆ. ದಿನಾಲು ಹಗರಣಗಳು ಟಿವಿ ಧಾರಾವಾಹಿಯಂತೆ ಹೊರಗೆ ಬರುತ್ತಿದೆ. ಆದರೆ ಈಗ ಕೇಳಿಬರುತ್ತಿರುವ ಹೆಸರು ಬಿಜೆಪಿಯ ಕೆಲವೇ ಪ್ರಾಮಾಣಿಕ ಸಚಿವರಲ್ಲಿ ಒಬ್ಬರಾದ ಸುರೇಶ್ ಕುಮಾರ್. ಇವರು ಪ್ರಾಮಾಣಿಕರು ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಕಂಡಾಗ ಈ ಆರೋಪ ಉಳಿದ ಸಚಿವರ ಮೇಲಿನ ಆರೋಪಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಈಗಲೇ ಸುರೇಶ್ ಕುಮಾರ್ ಯಾವುದೇ ಅಕ್ರಮ ಎಸಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಅವಸರದ ಕ್ರಮ. ಆದರೆ ಒಂದು ವೇಳೆ ಅವರು ಪ್ರಾಮಾಣಿಕರೇ ಆಗಿದ್ದಲ್ಲಿ ಅವರ ರಾಜೀನಾಮೆ ಕರ್ನಾಟಕದ ಜನತೆಗೆ ಆದ ನಷ್ಟ ಎಂದೆನಿಸುತ್ತದೆ. ಆದುದರಿಂದ ತಾನು ಪ್ರಾಮಾಣಿಕ ಎಂಬ ಆತ್ಮಸ್ಥೈರ್ಯ ಅವರಲ್ಲಿ ಇದ್ದರೆ ಸುಳ್ಳು ಆರೋಪಗಳಿಗೆ ಅವರು ಅಂಜಬೇಕಾಗಿಲ್ಲ ಮತ್ತು ಅವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರು. ಅಲ್ಲದೆ ದಕ್ಷ ಮತ್ತು ಪ್ರಾಮಾಣಿಕ  ರಾಜಕಾರಣಿಗಳ ಸೇವೆ ನಮಗೆ ಅಗತ್ಯ ಕೂಡ.

Tuesday, April 24, 2012

ಬದಲಾಗುವುದು ಈ ಲೋಕ ನೀ ಬದಲಾದರೆ...


ಯುವ ಜನಾಂಗ ದಾರಿತಪ್ಪಿದೆ ಎಂದು ಗೊಣಗುವ ಹಿರಿಯರು ಮತ್ತು ಆಧುನಿಕ ಬದುಕಿಗೆ/ಜೀವನ ಶೈಲಿಗೆ ಹೊಂದಿಕೊಳ್ಳಬೇಕೆಂದು ಹೆತ್ತವರಿಗೇ ಬುದ್ಧಿಮಾತು ಹೇಳುವ ಯುವಜನತೆಯ ಮದ್ಯೆ ವಾಸ್ತವಕ್ಕೆ ಕನ್ನಡಿ ಹಿಡಿಯುವ ಯತ್ನ ಈ ಲೇಖನ.
ತೊಂಬತ್ತರ ದಶಕದ ಆದಿಯಲ್ಲಿ ನಮ್ಮ ಊರಿನ ಬೆರಳೆಣಿಕೆಯ ಮನೆಗಳಲ್ಲಿ ಮಾತ್ರ ಟಿವಿಯಿತ್ತು. ರಾಮಾಯಣ, ಮಹಾಭಾರತ ಧಾರಾವಾಹಿಗಳ ಸಮಯದಲ್ಲಿ ನಾವೆಲ್ಲಾ ಅಲ್ಲಿ ಸೇರುತ್ತಿದ್ದೆವು. ಆದರೆ ಪರಿಸ್ಥಿತಿ ಇಂದು ತುಂಬಾ ಬದಲಾಗಿದೆ. ಜಾಗತೀಕರಣದ ಪರಿಣಾಮವಾಗಿ ಇಂದು ನಾವೆಲ್ಲಾ ಕೈತುಂಬಾ  ಸಂಬಳ ಪಡೆಯುತ್ತಿದ್ದೇವೆ. ಟಿವಿ, ಕಂಪ್ಯೂಟರ್‌ಗಳು ಸಾಮಾನ್ಯವಾಗಿಬಿಟ್ಟಿವೆ. ಕಾರು, ಬಂಗಲೆಗಳ ಕನಸನ್ನು ನನಸಾಗಿಸುವ ಸಾಮರ್ಥ್ಯವುಳ್ಳವರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ಸೌಕರ್ಯಗಳ ಜೊತೆಗೆ ನಮ್ಮ ಜೀವನ ಶೈಲಿಯೂ ಬದಲಾಗಿದೆ. ಬದಲಾವಣೆ ಜಗತ್ತಿನ ನಿಯಮ ಮತ್ತು ಈ ಬದಲಾವಣೆ ಧನಾತ್ಮಕವಾಗಿದ್ದರೆ ಅದನ್ನು ವಿಕಸನವೆಂದೂ ಋಣಾತ್ಮಕವಾಗಿದ್ದರೆ ಅವನತಿಯೆಂದೂ ಕರೆಯುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಜೀವನ ಶೈಲಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ, ಧನಾತ್ಮಕ ಅಂಶಗಳಿಗಿಂತ ಋಣಾತ್ಮಕ ಅಂಶಗಳೇ ಅಧಿಕವಾಗಿರುವುದು ಅನುಭವಕ್ಕೆ ಬರುತ್ತದೆ. ಹಿಂದೆ ಶಾಲಾ ಪ್ರವಾಸ, ಶಾಲೆಯಲ್ಲಿ ನಡೆಯುವ ವಾರ್ಷಿಕ ಭಜನಾ ಉತ್ಸವ, ಯಕ್ಷಗಾನ, ಊರ ಜಾತ್ರೆಯಂತಹ ಸಂದರ್ಭದಲ್ಲೂ ನಾವು ತಂದೆಯಲ್ಲಿ ಹಣ ಕೇಳಲು ಯೋಚಿಸುತ್ತಿದ್ದರೆ ಇಂದಿನ ಮಕ್ಕಳು ಸೈಕಲ್, ಬೈಕ್, ಲ್ಯಾಪ್‌ಟಾಪ್‌ ಬೇಡಿಕೆಗಳನ್ನು ಯಾವುದೇ ಅಳುಕಿಲ್ಲದೆ ಹೆತ್ತವರ ಮುಂದಿಡುತ್ತಾರೆ. ಶ್ರೀಮಂತ ಕುಟುಂಬಗಳಲ್ಲಂತೂ ಕಾಲೇಜಿಗೆ ಹೋಗಲು (ಗೆಳೆಯ/ಗೆಳತಿಯರೊಂದಿಗೆ ಸುತ್ತಾಡಲು???) ಕಾರು ಕೊಡಿಸಲು ಹೆತ್ತವರನ್ನು ಪೀಡಿಸುತ್ತಾರೆ. ಎಲೆಕ್ಟ್ರಾನಿಕ್‍ ಮಾಧ್ಯಮಗಳ ಮೂಲಕ ಇಂದು ಜಗತ್ತಿನ ಎಲ್ಲಾ ಸರಕುಗಳ ಬಗ್ಗೆಯೂ ಮಾಹಿತಿ ದೊರೆಯುತ್ತಿದ್ದು ನಾವು ಕೆಲವೊಮ್ಮೆ ಅಗತ್ಯತೆಗೆ ಬದಲಾಗಿ ಪ್ರತಿಷ್ಟೆಗಾಗಿ ಖರೀದಿ ಮಾಡುತ್ತಿದ್ದೇವೆ. ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ’ಶಾಪಿಂಗ್‍’ನ್ನು ಹವ್ಯಾಸ ಎಂದು ನಮೂದಿಸುವುದರಲ್ಲಿ  ಏನೋ ಅವ್ಯಕ್ತ ಸಂತೋಷವನ್ನು ಅನುಭವಿಸುತ್ತಿದ್ದೇವೆ. ಈ ಬದಲಾವಣೆಗಳಿಗೆ ಮುಖ್ಯ ಕಾರಣ ಪಾಶ್ಚಿಮಾತ್ಯ ಸಂಸ್ಕೃತಿಯ (ಅಂಧ?) ಅನುಕರಣೆ. ಈ ಅನುಕರಣೆ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳದಿದ್ದರೂ ಪಾಶ್ಚಿಮಾತ್ಯ ಉಡುಪು ಧರಿಸುತ್ತೇವೆ. ಆಹಾರ ಪದ್ಧತಿಯಲ್ಲೂ ಬದಲಾವಣೆಯನ್ನು ಕಾಣುತ್ತೇವೆ. ಕೆಲವು ಸಂದರ್ಭಗಳಲ್ಲಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಸೆಳೆತ ಮತ್ತು ತನ್ನದು ಆಧುನಿಕ ಶೈಲಿಯ ಜೀವನ ಎಂದು ತೋರ್ಪಡಿಸುವ ತವಕ ನಮ್ಮ ಅಭಿರುಚಿಯನ್ನು ಕೊಂದುಬಿಡುತ್ತದೆ. ಇಷ್ಟೆಲ್ಲದರ ನಡುವೆ ಪಾಶ್ಚಿಮಾತ್ಯರಲ್ಲಿನ ಒಳ್ಳೆಯ ಅಂಶಗಳಾದ ಸಾಮಾಜಿಕ ಕಳಕಳಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಇತ್ಯಾದಿಗಳನ್ನು ನಾವು ತಪ್ಪಿಯೂ ಅಳವಡಿಸುವುದಿಲ್ಲ. ಈ ವಿಚಾರದಲ್ಲಿ ವಿದ್ಯಾವಂತರೂ ಅವಿದ್ಯಾವಂತರಾಗಿರುವುದು ನಿಜಕ್ಕೂ ಖೇದಕರ. ಇವುಗಳ ಜೊತೆಗೆ ಹಣ ಮಾಡುವ ಆತುರದಲ್ಲಿ ನಾವು ಮಾನವೀಯ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿದ್ದೇವೆಯೋ ಎಂದು ನನಗೆ ಅನಿಸುತ್ತದೆ. ಹಣದ ಮುಂದೆ ಸಂಬಂಧಗಳು ಕ್ಷೀಣಿಸುತ್ತಿವೆ. ಇವೆಲ್ಲಾ ಸ್ಥಿತ್ಯಂತರಗಳನ್ನು ಕಂಡಾಗ ಬದಲಾವಣೆ ಅಗತ್ಯವೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬದಲಾವಣೆ ಮತ್ತು ಆಧುನಿಕತೆ ನಮ್ಮ ವೈಚಾರಿಕತೆಯಲ್ಲಿ ಇರಬೇಕೇ ಹೊರತು ತೋರ್ಪಡಿಕೆಯಲ್ಲಿ ಅಲ್ಲ.

Sunday, March 25, 2012

ಕಥೆ - ’ಆಕೆ’ ಯ ಜೊತೆ (ಅನೈತಿಕ) ಸಂಪರ್ಕ...

ಆ ರಾತ್ರಿ ನಡೆದ ಘಟನೆಯನ್ನು ನೆನಪಿಸುತ್ತಾ... ಆಗ ನಾನು ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯೊಂದರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೆ. ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದ ನಾನು ಸಂಜೆಯ ನಂತರವೂ ಪ್ರಯೋಗಾಲಯದಲ್ಲಿರುವುದು ಸಾಮಾನ್ಯವಾಗಿತ್ತು. ಆಗ ಪಿಎಚ್‍ಡಿ ಪ್ರಬಂಧ ಸಿದ್ಧಪಡಿಸುವ ಹಂತದಲ್ಲಿದ್ದುದರಿಂದ ದಿನವೂ ರೂಮಿಗೆ ಬರುವಾಗ ಮಧ್ಯರಾತ್ರಿ ಕಳೆಯುತ್ತಿತ್ತು. ’ಆ’ ರಾತ್ರಿ ಎಂದಿನಂತೆ ಸುಮಾರು 12 ಘಂಟಗೆ ಪ್ರಯೋಗಾಲಯದ ಲೈಟ್ ಆರಿಸಿ, ಬೀಗ ಹಾಕಿ, ಕೀಯನ್ನು ಕಾವಲುಗಾರನಿಗೆ ನೀಡಿ ರೂಮಿನತ್ತ ಹೆಜ್ಜೆ ಹಾಕಿದೆ. ಅದು ಸುಮಾರು 10 ನಿಮಿಷಗಳ ಹಾದಿ. ಹಾಸ್ಟೇಲ್‍ಗಳ ಎದುರಿನಿಂದ ಹಾದುಹೋಗುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದುದರಿಂದ ಹೆಚ್ಚಿನ ಕೋಣೆಗಳಲ್ಲಿ ಲೈಟ್ ಉರಿಯುತ್ತಿತ್ತು. ಆದುದರಿಂದ ಮಧ್ಯರಾತ್ರಿಯಾದರೂ ನೀರವತೆ ಮಾಯವಾಗಿತ್ತು. ಕಾಲೇಜು ಆವರಣ ದಾಟಿ, ಮುಖ್ಯ ರಸ್ತೆಗೆ ಬಂದೆ. ರಸ್ತೆಯೆಲ್ಲಾ ನಿರ್ಜನವಾಗಿತ್ತು. ಕೆಲವು ನಾಯಿಗಳು ನಗರಪಾಲಿಕೆಯ ತೊಟ್ಟಿಯಲ್ಲಿರುವ ಆಹಾರಕ್ಕಾಗಿ ಕಿತ್ತಾಡುತ್ತಿದ್ದವು. ಅವುಗಳನ್ನು ಸಾಕಷ್ಟು ಅಂತರವಿಟ್ಟುಕೊಂಡು ದಾಟಿದೆ. ಸ್ವಲ್ಪ ದೂರ ಕ್ರಮಿಸಲು ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ; ಅಸ್ಪಷ್ಟವಾಗಿತ್ತು. ಸೂಕ್ಷ್ಮವಾಗಿ ಗಮನಿಸಿದೆ, ಹೌದು ಇದು ’ಆಕೆಯೇ’. ಮೈಯಲ್ಲಿ ಸಣ್ಣ ನಡುಕ ಉಂಟಾಯಿತು. ಆದರೂ ತೋರ್ಪಡಿಸದೆ ನೇರವಾಗಿ ರೂಮಿನತ್ತ ಹೆಜ್ಜೆ ಹಾಕಿದೆ. ಆಕೆ ನನ್ನನ್ನು ಮತ್ತಷ್ಟು ಸಮೀಪಿಸಿದಳು. ಆಕೆಯ ಬರುವಿಕೆಯ ಸದ್ದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಡಿಗೆಯ ವೇಗವನ್ನು ಹೆಚ್ಚಿಸಿದೆ. ರೂಮಿನ ಸಮೀಪ ತಲುಪಿದಾಗ ಮೈಯೆಲ್ಲಾ ಬೆವರಿತ್ತು. ಬೀಗ ತೆಗೆದವನೇ, ಒಳಗೆ ಬಂದು ತಕ್ಷಣ ಬಾಗಿಲು ಭದ್ರಪಡಿಸಿ ನಿಟ್ಟುಸಿರು ಬಿಟ್ಟೆ. ಅಬ್ಬ... ಆಕೆ ಹೊರಗೇ ಉಳಿದಳು. ಬಟ್ಟೆ ಬದಲಾಯಿಸಿ, ಮುಖ ತೊಳೆದೆ. ಊಟದ ತಟ್ಟೆ ಮತ್ತು ಕೆಲವು ಪಾತ್ರೆಗಳು ಸಿಂಕಿನಲ್ಲಿ ಬಿದ್ದಿದ್ದವು. ಅವುಗಳೆಲ್ಲವನ್ನೂ ತೊಳೆದು ನಿದ್ರಿಸಲೆಂದು ಹಾಸಿಗೆಯಲ್ಲಿ ಮೈ ಚಾಚಿದಾಗ ಘಂಟೆ 12.30 ಕಳೆದಿತ್ತು. ನಿದ್ರೆಗೆ ಜಾರುವಷ್ಟರಲ್ಲಿ ಓನರ್ ಮನೆಯ ನಾಯಿ ಬೊಗಳುವುದು ಕೇಳಿತು ಮತ್ತು ಹೆದರಿಕೆಯೂ ಆಯಿತು. ಕೆಲವು ನಿಮಿಷಗಳ ನಂತರವೂ ಬೊಗಳುವಿಕೆ ನಿಲ್ಲದಿದ್ದಾಗ ಮೆಲ್ಲನೆ ಬಾಗಿಲು ತೆರೆದು, ನಾಯಿಯತ್ತ ಟಾರ್ಚ್‍ ಹಾಯಿಸಿದೆ. ಇರುವೆಗಳು ಅದರ ಅನ್ನದ ತಟ್ಟೆಯನ್ನು ಆಕ್ರಮಿಸಿದ್ದವು. ಆ ಕಡೆ ತೆರಳಿ ನಾಯಿಯನ್ನು ಸಂಕೊಲೆಯಿಂದ ಬಿಡಿಸಿದೆ. ನಂತರ ಕೈ ತೊಳೆದು ಒಳ ಬಂದು ಪುನಃ ಹಾಸಿಗೆಯಲ್ಲಿ ಮೈ ಚಾಚಿದೆ. ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ಪಾದವನ್ನು ಯಾರೋ ಸ್ಪರ್ಶಿಸಿದಂತಾಯಿತು. ಆಕೆಯೇ? ನೋಡಿದೆ; ಹೌದು ಆಕೆಯೇ. ಬೆಚ್ಚಿಬಿದ್ದೆ. ಬಹುಶ ನಾನು ನಾಯಿಯನ್ನು ಬಿಡಿಸಲು ತೆರಳಿದಾಗ ಆಕೆ ರೂಮಿನೊಳಕ್ಕೆ ನುಗ್ಗಿ ಅವಿತುಕೊಂಡಿರಬೇಕು. ಆಕೆ ಹಾಗೆಯೇ ಮೇಲೇರಿ ಬರುತ್ತಿದ್ದಳು. ಪ್ರತಿಭಟಿಸಿದೆ... ಊಹುಂ... ಆಕೆ ಲೆಕ್ಕಿಸಲೇ ಇಲ್ಲ. ಮೇಲೇರಿ ನನ್ನ ಮುಖದ ಸಮೀಪ ಬಂದಳು. ಕೆನ್ನೆ... ತುಟಿ... ಪುನಃ ಕೆಳಗೆ ಸರಿದಳು. ಹೆದರಿಕೆಯಿಂದ ಬೆವರಿದೆ. ಆದರೇನು ಮಾಡಲಿ? ನಿಸ್ಸಹಾಯಕನಾಗಿದ್ದೆ. ದೇವರನ್ನು ಪ್ರಾರ್ಥಿಸುವುದೊಂದೇ ನನಗೆ ಉಳಿದಿರುವ ದಾರಿಯಾಗಿತ್ತು. ಆದರೆ ದೇವರಿಗೂ ನನ್ನಲ್ಲಿ ಮುನಿಸಿದ್ದಿರಬೇಕು. ಕೆಲವೇ ನಿಮಿಷಗಳಲ್ಲಿ ಏನು ನಡೆಯಬಾರದೆಂದು ಅನಿಸಿದ್ದೆನೋ ಅದು ನಡೆದೇ ಹೋಯಿತು. ಸಣ್ಣಗೆ ಚೀರಿದೆ. ಆಕೆಗೆ ಇದು ನಿತ್ಯ ಕಾಯಕವಾದುದರಿಂದಲೋ ಏನೋ ಆಯಾಸಗೊಳ್ಳಲೇ ಇಲ್ಲ. ತನ್ನ ಕೆಲಸ ಮುಗಿಸಿದವಳೇ ತೆರಳಿದಳು. ನಾನು ಮಾತ್ರ ಆ  ಅನಿರೀಕ್ಷಿತ ಘಟನೆಯಿಂದ ಗಾಬರಿಯಾಗಿದ್ದೆ. ಕೆಲವು ದಿನಗಳ ಹಿಂದೆಯಷ್ಟೇ ಸ್ನೇಹಿತನೋರ್ವ ಆಕೆಯ ಬಗ್ಗೆ ಎಚ್ಚರಿಸಿ, ಆಕೆಯಿಂದ ದೂರವಿರುವಂತೆ ಸೂಚಿಸಿದ್ದ. ಆದರೇನು ಮಾಡಲಿ? ಎಲ್ಲವೂ ನಡೆದುಹೋಗಿತ್ತು. ಮರುದಿನ ಆ ಸ್ನೇಹಿತನಲ್ಲಿ ರಾತ್ರಿ ನಡೆದ ಘಟನೆಯನ್ನು ವಿವರಿಸಿದೆ. ಆತ ನನ್ನನ್ನು ಸಮಾಧಾನಪಡಿಸಿ ಧೈರ್ಯ ತುಂಬಿದ. ಆದರೆ ನನಗೆ ಅದೊಂದೇ ಚಿಂತೆ. ’ಆ ರೋಗ’ ಬಂದರೆ? ನೆನೆದಾಗಲೇ ನಿಂತ ನೆಲ ಕುಸಿದಂತಾಯಿತು. ಮಾನಸಿಕವಾಗಿ ಕುಗ್ಗಿ ಹೋದೆ. ಒಂದು ವಾರದ ನಂತರವೂ ನನ್ನಲ್ಲಿ ಚಿಂತೆ ಇರುವುದನ್ನು ಗಮನಿಸಿದ ಸ್ನೇಹಿತ ನನಗೊಂದು ಸಲಹೆ ನೀಡಿದ. ಡಿಸ್ಪೆನ್ಸರಿಗೆ ಹೋಗಿ ಡಾಕ್ಟರ್‌ಗೆ ಆ ರಾತ್ರಿ ನಡೆದ ಘಟನೆಯನ್ನು ಹೇಳಿ ’ಆ ರೋಗ’ದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ. ನನಗೂ ಸರಿಯೆನಿಸಿತು. ಡಿಸ್ಪೆನ್ಸರಿಗೆ ತೆರಳಿ ಡಾಕ್ಟರ್‌ಗೆ ಎಲ್ಲವನ್ನೂ ತಿಳಿಸಿದೆ. ಅವರು ’ಆ ಪರೀಕ್ಷೆ’ ನಡೆಸಲು ಲ್ಯಾಬ್ ಅಸಿಸ್ಟೆಂಟ್‍ನಲ್ಲಿ ಹೇಳಿದರು. ನನ್ನ ರಕ್ತದ ಸ್ಯಾಂಪಲ್ ತೆಗೆದುಕೊಂಡ ಅವರು ಸಂಜೆ ಬಂದು ರಿಪೋರ್ಟ್ ತೆಗೆದುಕೊಳ್ಳುವಂತೆ ಹೇಳಿದರು. ದಿನವಿಡೀ ಚಡಪಡಿಸುತ್ತಾ ಕಳೆದೆ. ಸಂಜೆಯಾಗುತ್ತಲೇ ಡಿಸ್ಪೆನ್ಸರಿಗೆ ಹೋಗಿ   ರಿಪೋರ್ಟ್ ಕೇಳಿದೆ. ಅದಾಗಲೇ ಸಿದ್ಧಪಡಿಸಿದ್ದ ರಿಪೋರ್ಟನ್ನು ಕವರಿನಲ್ಲಿ ಹಾಕುತ್ತಾ ನಿಮಗೆ ’ಆ ರೋಗ’ ಬಂದಿಲ್ಲ ಎಂದು ಹೇಳಿದರು. ನಿಟ್ಟುಸಿರು ಬಿಟ್ಟೆ. ಕವರ್ ತೆಗೆದು ನೋಡುತ್ತಲೇ ಸಮಾಧಾನವಾಗಿತ್ತು. ಮಲೇರಿಯಾ ಬಂದಿರಲಿಲ್ಲ. ಮನಸ್ಸಿನಲ್ಲೇ ಆ ಹೆಣ್ಣು ಸೊಳ್ಳೆ(ಸೂಳೆ)ಗೆ ಥ್ಯಾಂಕ್ಸ್ ಹೇಳಿದೆ.
(ಇದು ನಾನು ಪಿಎಚ್‍ಡಿ ಅಧ್ಯಯನ ಮಾಡುತ್ತಿದ್ದಾಗ ಬರೆದ ಕಥೆ. ನಿಮಗಾಗಿ ಇಲ್ಲಿ ಇದನ್ನು ಪ್ರಕಟಿಸಿದ್ದೇನೆ)

Friday, February 24, 2012

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

 

ಮಾನ್ಯ ಯಡಿಯೂರಪ್ಪನವರೇ,

ಹೊಲಸು ರಾಜಕೀಯದ ಬಗ್ಗೆ ಮಾತನಾಡಬಾರದು ಮತ್ತು ಬರೆಯಬಾರದು ಎಂದು ಎಷ್ಟೋ ಬಾರಿ ತೀರ್ಮಾನಿಸಿದ್ದರೂ ತಮ್ಮ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ತಮ್ಮ ವರ್ತನೆಗಳನ್ನು ನೋಡಿದಾಗ ಕೆಲವೊಂದು ಅಂಶಗಳನ್ನು ತಮ್ಮ ಗಮನಕ್ಕೆ ತರಬೇಕೆಂದೆನಿಸಿತು. ಅದಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದರಲ್ಲಿನ ಯಾವುದೇ ಸಾಲುಗಳು ತಮಗೆ ಬೇಸರ ತರಿಸಿದರೆ ಅದಕ್ಕೊಂದು ಕ್ಷಮೆ ಇರಲಿ.

ನಾನು ಶಾಲಾ ಮೆಟ್ಟಿಲು ಹತ್ತುವ ಮೊದಲೇ ಆರ್ ಎಸ್ ಎಸ್ಶಾಖೆಗೆ ಹೋಗುತ್ತಿದ್ದೆ. ಸಂಘ ನನಗೆ ಶಿಸ್ತು, ಸಮಯಪಾಲನೆ, ಸರಳತೆ, ದೇಶಭಕ್ತಿ ಮುಂತಾದ ಹಲವು ಗುಣಗಳನ್ನು ಜೀವನದಲ್ಲಿ ಅಳವಡಿಸುವಂತೆ ಪ್ರೇರೇಪಿಸಿದೆ. ಅಂತಹ ಸಂಘ ಪರಿವಾರದ ಹಿನ್ನಲೆಯಿಂದ ಬಂದ ತಮ್ಮ ಬಗ್ಗೆ ನನಗೆ ಮೊದಲಿನಿಂದಲೂ ಗೌರವ. ಅಲ್ಲದೆ ತಾವು ಹಿಂದೆ ನಡೆಸಿದ ರೈತ ಪರ ಹೋರಾಟಗಳು ಮತ್ತು ಪಕ್ಷವನ್ನು ಮುನ್ನಡೆಸುತ್ತಿದ್ದ ರೀತಿ ತಮ್ಮ ಬಗ್ಗೆ ನನ್ನಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿತು.ಆದುದರಿಂದಲೇ ತಾವು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದಾಗ ಬಹಳ ಸಂಭ್ರಮಪಟ್ಟಿದ್ದೆ ಮತ್ತು ಉತ್ತಮ ಆಡಳಿತವನ್ನೂ ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆಯ ಗೋಪುರ ಮರಳಿನ ಸೌಧದಂತೆ ಕುಸಿದು ಬಿದ್ದಿದೆ. ಅಧಿಕಾರ ಎಂಬುದು ಒಬ್ಬ ವ್ಯಕ್ತಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು (ಕೆಡಿಸಬಹುದು?) ಎಂಬುದಕ್ಕೆ ತಾವು ನಿದರ್ಶನವಾದುದು ಒಂದು ದುರಂತ. ಮುಖ್ಯಮಂತ್ರಿ ಪದವಿಗೆ ಹಲವು ಆಕಾಂಕ್ಷಿಗಳಿದ್ದರೂ ನಿಮ್ಮ ಹಿರಿತನ ಮತ್ತು ಸಾಮರ್ಥ್ಯವನ್ನು ಮನಗಂಡು ಪಕ್ಷ ಆ ಜವಾಬ್ದಾರಿಯನ್ನು ತಮಗೆ ನೀಡಿತು. ಆದರೆ ಹೊಣೆಗಾರಿಕೆಯನ್ನರಿತು ಅಡಳಿತ ನಡೆಸುವ ಬದಲಾಗಿ ತಾವು ಅಧಿಕಾರವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿರಿ. ತದನಂತರದ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳು ತಮಗೆ ತಿಳಿದೇ ಇದೆ. ಈಗ ಪುನಃ ಅಧಿಕಾರಕ್ಕಾಗಿ ಹೋರಾಟವನ್ನು ಆರಂಭಿಸಿದ್ದೀರಿ. ಈ ಸಂದರ್ಭದಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಿಮ್ಮ ಮುಂದಿಡುವುದಕ್ಕೆ ಇಷ್ಟಪಡುತ್ತೇನೆ.

  •  ಅಧಿಕಾರ ಉಳಿಸುವ ಧಾವಂತದಲ್ಲಿ ಸಂಘ ಪರಿವಾರದ ಸಿದ್ಧಾಂತವನ್ನು ಮೀರಿ ’ಆಪರೇಷನ್ ಕಮಲ’ ದ ಮೂಲಕ ಬೇರೆ ಪಕ್ಷಗಳ ಶಾಸಕರನ್ನು ವಿವಿಧ ಆಮಿಷಗಳನ್ನು ತೋರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರಿ. ನಂತರ ಮಂತ್ರಿ ಪದವಿಗೆ ಅರ್ಹರಾದ ಅನೇಕ ಮಂದಿ ಪಕ್ಷದಲ್ಲಿದ್ದರೂ ವಲಸಿಗರಿಗೆ ಮಂತ್ರಿ ಪದವಿ ನೀಡಿ, ಪಕ್ಷಕ್ಕಾಗಿ ತ್ಯಾಗ ಮಾಡಿ ಎಂದು ಹಿರಿಯ ನಾಯಕರ ಬಾಯಿ ಮುಚ್ಚಿಸಿದ ನೀವು ಈಗ ಮಾಡುತ್ತಿರುವುದಾದರೂ ಏನು?
  •  ಅಷ್ಟಕ್ಕೂ ನೀವು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದುದು ಯಾರಿಂದ? ತಮ್ಮ ಕುಟುಂಬದ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ತಾವೇ ಸ್ವತಃ ಖೆಡ್ಡಾ ನಿರ್ಮಾಣ ಮಾಡಿಕೊಂಡಿರಿ ಎಂಬುದು ತಮಗೆ ಮರೆತು ಹೋಯಿತೆ?
  •  ಅಂದು ಆರೋಪದ ಕಾರಣ ರಾಜೀನಾಮೆ ನೀಡಿದ ನೀವು ಇಂದು ಆರೋಪ ಮುಕ್ತರಾಗಿದ್ದೀರ? ಹಾಗಿರುವಾಗ ಯಾವ ಆಧಾರದಲ್ಲಿ ನೀವು ಮರಳಿ ಅಧಿಕಾರ ನೀಡಲು ಆಗ್ರಹಿಸುತ್ತೀರಿ?
  •  ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನೀವು ಇಂದು ಅವರ ರಾಜೀನಾಮೆ ಕೇಳುವಂತಹ ತಪ್ಪೇನಾಗಿದೆ?
  •  ತಾವು, ನಾನು ಪ್ರಬಲ ಸಮುದಾಯವೊಂದರ ನಾಯಕ ಮತ್ತು ಆ ಸಮುದಾಯ ದೂರ ಸರಿದರೆ ಪಕ್ಷಕ್ಕೆ ಸೋಲು ಖಚಿತ ಎಂದು ಹೇಳುತ್ತಿರುವುದನ್ನು ಕೇಳಿದ ಮೇಲೂ ನಿಮ್ಮನ್ನು ಜನನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಅಷ್ಟಕ್ಕೂ ರಾಜ್ಯ ಮತ್ತು ಪಕ್ಷ ಕೇವಲ ಸಮುದಾಯವೊಂದರ ಆಸ್ತಿಯೇ?
  •  ತಾವು ಪಕ್ಷ ಸಂಘಟನೆಗಾಗಿ ದುಡಿದವರಲ್ಲಿ ಪ್ರಮುಖರು ಎಂಬ ಮಾತ್ರಕ್ಕೆ ಪಕ್ಷ ತನ್ನೊಬ್ಬನ ಆಸ್ತಿ ಎಂಬಂತೆ ವರ್ತಿಸುವುದು ಎಷ್ಟು ಸರಿ?

ದಶಕಗಳ ಜನಪರ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡ ನೀವು ಇಷ್ಟು ಬಾಲಿಶವಾಗಿ ವರ್ತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜ್ಯ ಮತ್ತು ತಾವೇ ಬೆಳೆಸಿದ ಪಕ್ಷವನ್ನು ಬಲಿ ಕೊಡಬೇಡಿ ಎಂಬುದೊಂದೇ ನನ್ನ ಕೋರಿಕೆ.

ಇಂತಿ,

ಮಹೇಶ ಯಂ.ಜಿ.

ಕೆದಿಲ