Wednesday, January 24, 2018

ರಾಜ್ಯ ರಾಜಕಾರಣಿಗೊಂದು ಬಹಿರಂಗ ಪತ್ರ

ಮಾನ್ಯ ರಾಜಕೀಯ ನಾಯಕರೇ,
ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಮತದಾರರನ್ನು ಸೆಳೆಯುವುದಕ್ಕಾಗಿ ಇನ್ನಿಲ್ಲದ ಕಸರತ್ತನ್ನು ಆರಂಭಿಸಿದ್ದಾರೆ. ಜಾತಿ-ಮತಗಳ ಆಧಾರದಲ್ಲಿ ಜನರನ್ನು ಸೆಳೆಯುವ ಭರದಲ್ಲಿ ನೈಜ ಜಾತ್ಯಾತೀತ ಮೌಲ್ಯಗಳು ಅನಾಥವಾಗಿ ಮೂಲೆಯಲ್ಲಿ ಬಿದ್ದುಕೊಂಡಿವೆ. ಸಭ್ಯತೆಯನ್ನು ಮೀರಿದ ಟೀಕೆಗಳು ಜನರಲ್ಲಿ ರಾಜಕಾರಣಿಗಳ ಬಗ್ಗೆ ಅಸಹ್ಯ ಭಾವನೆಯನ್ನು ಉಂಟುಮಾಡಿದೆ. ಕೀಳು ರಾಜಕೀಯ ಪಕ್ಷಾತೀತವಾಗಿ ನಡೆಯುತ್ತಿದ್ದು ಸಭ್ಯತೆ ಶಿಸ್ತು ಮಾಯವಾಗಿದೆ. ಹೇಗಾದರೂ ಸರಿ, ಅಧಿಕಾರವೇ ಪರಮ ಗುರಿ ಎಂಬುದು ಎಲ್ಲಾ ಪಕ್ಷಗಳ ಮೂಲಮಂತ್ರವಾಗಿದೆ. ಇವೆಲ್ಲದರ ಮಧ್ಯೆ ಮತದಾರನ ಮನದಾಳದ ಮಾತನ್ನು ಕೇಳುವವರಿಲ್ಲವಾಗಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ. ಚುನಾವಣೆ ಕೇವಲ ಅಂಕೆಗಳ ಆಟವಲ್ಲ. ಅದು ಜನರ ಆಶೋತ್ತರಗಳನ್ನು ಆಲಿಸುವ, ಜನಹಿತಕ್ಕಾಗಿ ದುಡಿಯುವ ಮತ್ತು ದೇಶದ/ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ನಾಯಕರನ್ನು ಆಯ್ಕೆ ಮಾಡುವ ಪವಿತ್ರ ಕಾರ್ಯ. ಬೇಜವಬ್ಧಾರಿಯುತ, ಅಹಂಕಾರಿ ನಾಯಕರಿಂದಾಗಿ ಎಷ್ಟೋ ದೇಶಗಳು ಅಥವಾ ಜನಾಂಗಗಳು ಇತಿಹಾಸದ ಪುಟವನ್ನು ಸೇರಿರುವುದನ್ನು ನಾವು ನೋಡಿದ್ದೇವೆ. ಹಾಗೆಯೆ ಅನರ್ಹ ನಾಯಕರ ದುರಾಡಳಿತದಿಂದ ಬೇಸತ್ತು ಜನರು ಧಂಗೆಯ ಮೂಲಕ ತಮ್ಮ ನಾಯಕನನ್ನು ಕೆಳಗಿಳಿಸಿರುವ ಘಟನೆಗಳೂ ಇತಿಹಾಸದಲ್ಲಿ ದಾಖಲಾಗಿದೆ. ಆದುದರಿಂದ ರಾಜ್ಯದ ಜನನಾಯಕರೆಂದೆನಿಸಿಕೊಂಡವರು ಇನ್ನಾದರೂ ಜವಾಬ್ಧಾರಿಯತವಾಗಿ ವರ್ತಿಸುವುದೊಳಿತು. ಹಾಗೆಯೇ ಈ ರಾಜ್ಯದ ಬೇಕು-ಬೇಡಗಳನ್ನರಿತು ಅದರನುಸಾರ ಪ್ರಣಾಳಿಕೆಗಳನ್ನು ತಯಾರಿಸಿದರೆ ಜನರ ಮೆಚ್ಚುಗೆಗೆ ಪಾತ್ರವಾಗಬಹುದು ಮತ್ತು ಉತ್ತಮ ರಾಜಕಾರಣಕ್ಕೆ ಮಾದರಿ ಎನಿಸಿಕೊಳ್ಳಬಹುದು.. ಬದಲಾಗಿ ನಾಯಕನನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂಬಂತೆ ನಡೆದರೆ 'ಯಾರನ್ನೂ ಒಪ್ಪುವುದಿಲ್ಲ' (NOTA) ಎಂಬ ಆಯ್ಕೆಯೂ ಜನರ ಮುಂದಿದೆ ಎಂಬುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ.