Tuesday, December 25, 2012

’ಚಿಲ್ಲರೆ’ ವ್ಯವಹಾರ


ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ’ಚಿಲ್ಲರೆ ವ್ಯಾಪಾರದಲ್ಲಿ ನೇರ ವಿದೇಶೀ ಹೂಡಿಕೆ’ (ಎಫ್ ಡಿ ಐ) ಬಗ್ಗೆ ನಡೆಯುತ್ತಿದ್ದ ಚರ್ಚೆಯನ್ನು ನಾವೆಲ್ಲಾ ಟಿವಿಯಲ್ಲಿ ನೋಡಿದ್ದೇವೆ. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಪ್ರತಿಯೊಂದು ಪಕ್ಷವೂ ತನ್ನದೇ ಆದ ಸಿದ್ಧಾಂತದ ಆಧಾರದ ಮೇಲೆ ಸದನದಲ್ಲಿ ತನ್ನ ವಾದವನ್ನು ಮಂಡಿಸುವುದನ್ನು ನಾವು ವರ್ಷಗಳಿಂದ ಕಂಡಿದ್ದೇವೆ. ಇಲ್ಲಿ ಪಕ್ಷವೊಂದರ ವಾದ ನಮಗೆ ಸರಿ ಕಾಣದಿದ್ದರೆ ಅದು ಕೇವಲ ಅಭಿಪ್ರಾಯ ಬೇಧ ಮತ್ತು ಅದು ಸಹಜ ಕೂಡ. ಆದರೆ ನಾವು ಈ ಬಾರಿ ನೋಡಿದ್ದು ಇದಕ್ಕಿಂತ ಭಿನ್ನವಾದ ಚರ್ಚೆಯನ್ನು. ಇಲ್ಲಿ ಕೆಲವು ಪಕ್ಷಗಳು ತಮ್ಮ ಸಿದ್ಧಾಂತ (?) ವನ್ನು ಮಂಡಿಸಿದ್ದು ಸದನದಾಚೆ ನಡೆದ ವ್ಯವಹಾರದ ಮೇಲೆ ಎಂಬುದು ನಮ್ಮ ದುರ್ದೈವ. ಆ ಪಕ್ಷಗಳಿಗೆ ತಾವು ನಂಬಿದ ಸಿದ್ಧಾಂತ ಮತ್ತು ತಮ್ಮನ್ನು ನಂಬಿದ ಜನರಿಗಿಂತ ತಮ್ಮ ಇತರ ವ್ಯವಹಾರಗಳು ಪ್ರಮುಖ ಎಂದೆನಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದರೆ ಹೆಚ್ಚಾಗದು. ಒಂದು ಪಕ್ಷವಂತೂ ಚರ್ಚೆಯಲ್ಲಿ ಎಫ್ ಡಿ ಐ ವಿರೋಧಿಸಿ ಕೊನೆಗೆ ಮತದಾನದ ಸಂದರ್ಭದಲ್ಲಿ ಸದನದಿಂದ ಹೊರಗುಳಿದು ತನ್ನನ್ನೇ ತಾನು ಅಣಕವಾಡಿಕೊಂಡಿತು. ಸರಕಾರವೂ ಹೇಗಾದರೂ ಸರಿ, ಎಫ್ ಡಿ ಐ ಜಾರಿಗೆ ತರಲೇಬೇಕೆಂಬ ಧೋರಣೆಯೊಂದಿಗೆ ಈ ಪಕ್ಷಗಳನ್ನು ’ಚಿಲ್ಲರೆ’ ವ್ಯವಹಾರಕ್ಕೆ ಪ್ರೇರೇಪಿಸಿದ್ದು ಸರಕಾರಕ್ಕಾದ ನೈತಿಕ ಸೋಲಲ್ಲದೆ ಮತ್ತೇನಲ್ಲ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ನೇರ  ಪರಿಣಾಮ ಬೀರುವ ಇಂತಹ ಮಹತ್ವ ಪೂರ್ಣ ಮಸೂದೆಯ ವಿಷಯದಲ್ಲಿ ಸರಕಾರ ಮತ್ತು ಇತರ ಕೆಲವು ಪಕ್ಷಗಳು ನಡೆದ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಫಲತೆ ಎಂದರೆ ತಪ್ಪಾಗದು.