Wednesday, December 11, 2013

ಮಡೆ ಸ್ನಾನ - ಒಂದು ಅಭಿಪ್ರಾಯ


ನಂಬಿಕೆ ಎಂಬುದು ಮಾನವಕುಲದಷ್ಟೇ ಪುರಾತನವಾದುದು. ಎಲ್ಲಾ ಕಾಲದಲ್ಲೂ, ಜಗತ್ತಿನ ಎಲ್ಲಾ ಜನಾಂಗದಲ್ಲೂ, ಎಲ್ಲಾ ಧರ್ಮಗಳಲ್ಲೂ ಅವರದೇ ಆದ ನಂಬಿಕೆಗಳು ಇದ್ದವು ಮತ್ತು ಇಂದು ಕೂಡ ಇವೆ. ನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುವ ಗುಂಪು ಸಹ ಅಷ್ಟೇ ಇತಿಹಾಸವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಆಚರಣೆಗಳಲ್ಲಿ ಅಚಲ ನಂಬಿಕೆಯಿರುವ ಮತ್ತು ಪ್ರತಿಯೊಂದನ್ನೂ ಪ್ರಶ್ನಿಸುವ ಅಥವಾ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಗುಂಪುಗಳ ಮದ್ಯೆ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ’ಮಡೆ ಸ್ನಾನ’ ಇಂತಹ ವಿವಾದಿತ ಆಚರಣೆಗಳಲ್ಲಿ ಒಂದು.

ನನ್ನ ಅಭಿಪ್ರಾಯದ ಪ್ರಕಾರ ’ನಂಬಿಕೆ’ ಎಂಬ ಶಬ್ಧವೇ ತಿಳಿಸುವಂತೆ ಅದು ವೈಜ್ಞಾನಿಕ ಪ್ರಯೋಗ ಅಥವಾ ಅಧ್ಯಯನಗಳ ಮೂಲಕ ಸಾಧಿಸಲಾಗದ ವಿಷಯ. ಹಾಗೇನಾದರೂ ಸಾಧಿಸಲು ಸಾದ್ಯವಾದರೆ ಆಗ ಅದು ’ನಂಬಿಕೆ’ ಎಂಬುದರ ಬದಲು ’ಸತ್ಯ’ ಎಂದು ಕರೆಯಲು ಯೋಗ್ಯವೆನಿಸುತ್ತದೆ. ಆದುದರಿಂದ ಮೊತ್ತ ಮೊದಲನೆಯದಾಗಿ ನಂಬಿಕೆಯನ್ನು ವೈಜ್ಞಾನಿಕತೆಯ ದುರ್ಬೀನಿನಿಂದ ನೋಡುವುದನ್ನು ನಿಲ್ಲಿಸಬೇಕು. ನಂಬಿಕೆಗಳು ಆಯಾ ಪ್ರದೇಶಗಳಲ್ಲಿ ಅಲ್ಲಿನ ಸನ್ನಿವೇಶ ಮತ್ತು ಸಂದರ್ಭಕ್ಕೆ ಸರಿಯಾಗಿ ಹುಟ್ಟಿಕೊಂಡಂತಹುಗಳು. ಆದುದರಿಂದ ಅವು ಸಾರ್ವಕಾಲಿಕ ಅಥವಾ ಸಾರ್ವತ್ರಿಕವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಂಬಿಕೆಗಳು ಮತ್ತು ಅದಕ್ಕನುಗುಣವಾಗಿ ಹುಟ್ಟಿಕೊಂಡ ಆಚರಣೆಗಳು ಕಾಲಾಂತರದಲ್ಲಿ ಮಾರ್ಪಾಡು ಹೊಂದುವುದು ಇಲ್ಲವೇ ಸನ್ನಿವೇಶ ಮತ್ತು ಸಂದರ್ಭಕ್ಕನುಸಾರವಾಗಿ ಅವುಗಳನ್ನು ಮಾರ್ಪಾಡುಗೊಳಿಸುವುದು ಸರಿಯಾಗಿಯೇ ಇದೆ. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಮಡೆ ಸ್ನಾನವನ್ನು ಈ ಮೇಲೆ ವಿವರಿಸಿದ ರೀತಿಯಲ್ಲಿ ನೋಡುತ್ತಿದ್ದರೆ ಅದು ಇಷ್ಟೊಂದು ವಿವಾದದ ವಿಷಯವಾಗುತ್ತಿರಲಿಲ್ಲ. ಅನಾದಿ ಕಾಲದಿಂದ ನಡೆದು ಬಂದ ಆಚರಣೆ ಎಂಬ ಏಕೈಕ ವಾದಕ್ಕೆ ಅಂಟಿಕೊಂಡು, ಅದು ಇಂದಿಗೆ ಪ್ರಸ್ತುತವೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತಯಾರಿರದ ಗುಂಪು ಒಂದು ಕಡೆಯಿದ್ದರೆ, ಇನ್ನು ಅದಕ್ಕೆ ಜಾತಿಯ ಲೇಪನ ಮಾಡಿ ಸಮಾಜದಲ್ಲಿ ಗೊಂದಲ-ಒಡಕು ಮೂಡಿಸುವ ಮೂಲಕ ತಮ್ಮ ಲಾಭಕ್ಕಾಗಿ ಇದನ್ನು ವಿರೋಧಿಸುವ (ಉಪಯೋಗಿಸುವ?) ಗುಂಪು ಇನ್ನೊಂದು ಕಡೆಯಿದೆ. ಇವರನ್ನು ಒಂದೆಡೆ ಸೇರಿಸಿ ಚರ್ಚಿಸುವ ವೇದಿಕೆ ಕಲ್ಪಿಸಲು ಕೆಲವು ಗಣ್ಯರು ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಇನ್ನು ಈ ಪದ್ಧತಿಯನ್ನು ಆಚರಿಸುವ ಮಂದಿ ಯಾರದೋ ಒತ್ತಡಕ್ಕೆ ಇದನ್ನು ಮಾಡುತ್ತಿಲ್ಲ ಮತ್ತು ಅವರಲ್ಲಿ ಎಲ್ಲಾ ಜಾತಿಯ ಮಂದಿಯೂ ಇದ್ದಾರೆ ಎಂಬುದೂ ಗಮನಿಸಬೇಕಾದ ವಿಷಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದರ ಬಗೆಗಿನ ವಸ್ತುನಿಷ್ಠ ಚಿಂತನೆ ಅಗತ್ಯವೆಂಬುದು ನನ್ನ ಅಭಿಪ್ರಾಯ. ಆಚರಣೆಯ ಇತಿಹಾಸವನ್ನು ಕೆದಕುವುದರ ಬದಲು ಇಂದಿನ ಸಮಾಜ ಮತ್ತು ನಾಗರಿಕತೆಗೆ ಇದು ಪ್ರಸ್ತುತವೋ ಎಂಬ ಪ್ರಶ್ನೆ ಮಹತ್ವದ್ದಾಗಿದೆ. ಅಲ್ಲದೆ ಇದನ್ನು ಕಾನೂನಿನ ಮೂಲಕ ನಿಷೇಧಿಸುವುದರ ಬದಲು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವುದರ ಜೊತೆಗೆ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಸಹಕಾರಿಯಾದೀತು. ಈ ನಿಟ್ಟಿನಲ್ಲಿ ಎರಡೂ ಗುಂಪುಗಳು ಚಿಂತಿಸಲಿ ಎಂಬುದೇ ನನ್ನ ಹಾರೈಕೆ.