Monday, March 3, 2014

ಎತ್ತಿನಹೊಳೆ ರಾಜಕೀಯ


ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಉದ್ಘಾಟನೆ ಮತ್ತು ಶಿಲಾನ್ಯಾಸದ ಭರಾಟೆ ಹೆಚ್ಚುತ್ತಿದೆ. ಈ ಅವಸರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ದೃಶ್ಯ ಮಾದ್ಯಮಗಳಿಂದ ತಿಳಿದ ಪ್ರಕಾರ ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರಿನ ಮೆಟ್ರೊ ರೈಲಿನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.ಚುನಾವಣೆ ಸಮೀಪಿಸುತ್ತಿರುವಾಗ ಈ ತರಹದ ಸಭೆ ಸಮಾರಂಭಗಳನ್ನು ಆಯೋಜಿಸಿ ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ ಎಂದು ತೋರಿಸುವುದು ಇದರ ಹಿಂದಿನ ಉದ್ದೇಶ ಎಂಬುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ಇದು ಪಕ್ಷಾತೀತವಾಗಿ ನಡೆದುಬಂದ ಪರಂಪರೆ. ಮಾರ್ಚ್ ೩ರಂದು ಶಿಲಾನ್ಯಾಸ ನಡೆಸಿದ ಎತ್ತಿನಹೊಳೆ ಯೋಜನೆ ಇಷ್ಟಕ್ಕೇ ಸೀಮಿತವಾಗಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಇದು ಚುನಾವಣಾ ರಾಜಕೀಯದ ಭಾಗವಾಗಿ, ಪ್ರಕೃತಿಗೆ ವಿರುದ್ಧವಾಗಿ, ಜೈವಿಕ ಸೂಕ್ಷ್ಮತೆಯುಳ್ಳ ಪಶ್ಚಿಮ ಘಟ್ಟದಲ್ಲಿ ಅನುಷ್ಟಾನಗೊಳ್ಳುತ್ತಿರುವ ಯೋಜನೆ. ಪರಿಸರದ ಸಮತೋಲನ ತಪ್ಪಿದರೆ ಸರಿಪಡಿಸಲಾಗದ ಹಾನಿ ಉಂಟಾಗುವ ಅಪಾಯವಿರುವ ಈ ಯೋಜನೆಯನ್ನು ಇಷ್ಟು ತರಾತುರಿಯಲ್ಲಿ ಅನುಷ್ಟಾನಗೊಳಿಸುವ ಅಗತ್ಯವಿದೆಯೇ ಎಂಬುದು ಇಲ್ಲಿಯ ಮೂಲ ಪ್ರಶ್ನೆ. ಜೊತೆಗೆ ಒಂದು ಜಿಲ್ಲೆಗೆ ನೀರು ಒದಗಿಸಲು ಇನ್ನೊಂದು ಜಿಲ್ಲೆಯ ಜನರಿಂದ ಅದನ್ನು ಕಿತ್ತುಕೊಳ್ಳುವುದು ಪರಿಹಾರವೇ?

ಇಂದು ನಮ್ಮಲ್ಲಿ ನೀರಿನ ಅಭಾವವಿದ್ದರೆ ಅದಕ್ಕೆ ನಾವು ಪ್ರಕೃತಿಗೆ ವಿರುದ್ಧವಾಗಿ ಕಾರ್ಯಯೋಜನೆಗಳನ್ನು ಕೈಗೊಂಡುದೇ ಪ್ರಮುಖ ಕಾರಣ. ಅವೈಜ್ಞಾನಿಕ ನಗರೀಕರಣ ಮತ್ತು ಕೈಗಾರೀಕರಣದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇನ್ನಾದರೂ ಈ ಸತ್ಯವನ್ನು ಅರಿತು ಪರಿಸರ ಸಹ್ಯವಾದ ಯೋಜನೆಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಹನಿ ನೀರಿಗಾಗಿ ಕಿತ್ತಾಡುವ ದಿನ ದೂರವಿಲ್ಲ. ಕೆರೆಗಳ ಪುನಶ್ಚೇತನ ಕೇವಲ ಹಣ ಪೋಲು ಮಾಡುವ ಮಾರ್ಗವಾಗದೆ ಸರಿಯಾದ ರೀತಿಯಲ್ಲಿ ಕಾರ್ಯಗತವಾಗಬೇಕಿದೆ. ಇದೆಲ್ಲವನ್ನು ಬಿಟ್ಟು ಹರಿವ ನದಿಯ ದಿಕ್ಕನ್ನೇ ಬದಲಾಯಿಸುತ್ತೇನೆ (ಆಧುನಿಕ ಭಗೀರಥರು!) ಎಂದು ಹೊರಟರೆ ಅದು ಅತಿ ಬುದ್ಧಿವಂತಿಕೆಯಾದೀತು. ನದಿ ತಿರುವು ಯೋಜನೆಯನ್ನು ಬೆಂಬಲಿಸುವ ವರ್ಗದ ’ವ್ಯರ್ಥವಾಗಿ ಸಮುದ್ರ ಸೇರುವ ನೀರಿನ ಸದ್ಭಳಕ’ ಎಂಬ ಸಮರ್ಥನೆ ವಿಚಿತ್ರವಾಗಿದೆ. ನದಿಯ ನೀರು ಸಮುದ್ರ ಸೇರುವುದನ್ನು ವ್ಯರ್ಥ ಎನ್ನುವ ಮಂದಿಗೆ ಪರಿಸರ ಶಾಸ್ತ್ರವನ್ನು ಆರಂಭದಿಂದ ಕಲಿಸಬೇಕಿದೆ. ಸಮುದ್ರ ಸೇರುವ ನದಿ ನೀರು ಜಲಚಕ್ರದ ಒಂದು ಭಾಗ ಎಂಬುದು ನಮ್ಮ ಪ್ರಾಥಮಿಕ ಶಾಲಾ ಮಕ್ಕಳಿಗೂ ಗೊತ್ತು. ನಮ್ಮನ್ನಾಳುವ ರಾಜಕಾರಣೆಗಳ ಜ್ಞಾನದ ಮಟ್ಟ ಇದಕ್ಕಿಂತಲೂ ಕೆಳಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಇನ್ನು ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಬೃಹತ್ ಕೈಗಾರಿಕೆಗಳು ಇಲ್ಲಿ ಆರಂಭವಾಗಿವೆ. ಜೊತೆಗೆ ಮಂಗಳೂರು ಶೈಕ್ಷಣೆಕ ಕೇಂದ್ರವಾಗಿ ಈಗಾಗಲೇ ಗುರುತಿಸಿಕೊಂಡಿದೆ. ಹೀಗಾಗಿ ಮುಂದೆ ನಗರದ ಅಥವಾ ಒಟ್ಟಾರೆಯಾಗಿ ದಕ್ಷಿಣ ಕನ್ನಡದ ನೀರಿನ ಅಗತ್ಯತೆ ಹೆಚ್ಚುತ್ತಾ ಹೋಗುತ್ತದೆ. ಯೋಜನಾ ವರದಿ ತಯಾರಿಸುವಾಗ ಇದನ್ನು ತಜ್ಞರೆನಿಸಿದವರು ಪರಿಗಣಿಸಿದ್ದಾರೆಯೇ? ಅಲ್ಲದೆ ಯೋಜನೆಯ ಜಾರಿಯಿಂದಾಗುವ ಹಾನಿಯನ್ನು ಈ ಸೂಕ್ಷ ಪರಿಸರ ತಾಳಿಕೊಂಡೀತೆ? ಆದುದರಿಂದ ನೀರಿನ ಕೊರತೆ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ/ ರಾಜಕೀಯ ನಾಯಕರು ಚಿಂತಿಸಬೇಕಿದೆ. ಇಲ್ಲವಾದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ನಷ್ಟ ಅನುಭವಿಸಿ ನದಿಗೆ ಹಾರವಾದರೆ ಆಶ್ಚರ್ಯವಿಲ್ಲ.