Tuesday, April 24, 2012

ಬದಲಾಗುವುದು ಈ ಲೋಕ ನೀ ಬದಲಾದರೆ...


ಯುವ ಜನಾಂಗ ದಾರಿತಪ್ಪಿದೆ ಎಂದು ಗೊಣಗುವ ಹಿರಿಯರು ಮತ್ತು ಆಧುನಿಕ ಬದುಕಿಗೆ/ಜೀವನ ಶೈಲಿಗೆ ಹೊಂದಿಕೊಳ್ಳಬೇಕೆಂದು ಹೆತ್ತವರಿಗೇ ಬುದ್ಧಿಮಾತು ಹೇಳುವ ಯುವಜನತೆಯ ಮದ್ಯೆ ವಾಸ್ತವಕ್ಕೆ ಕನ್ನಡಿ ಹಿಡಿಯುವ ಯತ್ನ ಈ ಲೇಖನ.
ತೊಂಬತ್ತರ ದಶಕದ ಆದಿಯಲ್ಲಿ ನಮ್ಮ ಊರಿನ ಬೆರಳೆಣಿಕೆಯ ಮನೆಗಳಲ್ಲಿ ಮಾತ್ರ ಟಿವಿಯಿತ್ತು. ರಾಮಾಯಣ, ಮಹಾಭಾರತ ಧಾರಾವಾಹಿಗಳ ಸಮಯದಲ್ಲಿ ನಾವೆಲ್ಲಾ ಅಲ್ಲಿ ಸೇರುತ್ತಿದ್ದೆವು. ಆದರೆ ಪರಿಸ್ಥಿತಿ ಇಂದು ತುಂಬಾ ಬದಲಾಗಿದೆ. ಜಾಗತೀಕರಣದ ಪರಿಣಾಮವಾಗಿ ಇಂದು ನಾವೆಲ್ಲಾ ಕೈತುಂಬಾ  ಸಂಬಳ ಪಡೆಯುತ್ತಿದ್ದೇವೆ. ಟಿವಿ, ಕಂಪ್ಯೂಟರ್‌ಗಳು ಸಾಮಾನ್ಯವಾಗಿಬಿಟ್ಟಿವೆ. ಕಾರು, ಬಂಗಲೆಗಳ ಕನಸನ್ನು ನನಸಾಗಿಸುವ ಸಾಮರ್ಥ್ಯವುಳ್ಳವರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ಸೌಕರ್ಯಗಳ ಜೊತೆಗೆ ನಮ್ಮ ಜೀವನ ಶೈಲಿಯೂ ಬದಲಾಗಿದೆ. ಬದಲಾವಣೆ ಜಗತ್ತಿನ ನಿಯಮ ಮತ್ತು ಈ ಬದಲಾವಣೆ ಧನಾತ್ಮಕವಾಗಿದ್ದರೆ ಅದನ್ನು ವಿಕಸನವೆಂದೂ ಋಣಾತ್ಮಕವಾಗಿದ್ದರೆ ಅವನತಿಯೆಂದೂ ಕರೆಯುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಜೀವನ ಶೈಲಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ, ಧನಾತ್ಮಕ ಅಂಶಗಳಿಗಿಂತ ಋಣಾತ್ಮಕ ಅಂಶಗಳೇ ಅಧಿಕವಾಗಿರುವುದು ಅನುಭವಕ್ಕೆ ಬರುತ್ತದೆ. ಹಿಂದೆ ಶಾಲಾ ಪ್ರವಾಸ, ಶಾಲೆಯಲ್ಲಿ ನಡೆಯುವ ವಾರ್ಷಿಕ ಭಜನಾ ಉತ್ಸವ, ಯಕ್ಷಗಾನ, ಊರ ಜಾತ್ರೆಯಂತಹ ಸಂದರ್ಭದಲ್ಲೂ ನಾವು ತಂದೆಯಲ್ಲಿ ಹಣ ಕೇಳಲು ಯೋಚಿಸುತ್ತಿದ್ದರೆ ಇಂದಿನ ಮಕ್ಕಳು ಸೈಕಲ್, ಬೈಕ್, ಲ್ಯಾಪ್‌ಟಾಪ್‌ ಬೇಡಿಕೆಗಳನ್ನು ಯಾವುದೇ ಅಳುಕಿಲ್ಲದೆ ಹೆತ್ತವರ ಮುಂದಿಡುತ್ತಾರೆ. ಶ್ರೀಮಂತ ಕುಟುಂಬಗಳಲ್ಲಂತೂ ಕಾಲೇಜಿಗೆ ಹೋಗಲು (ಗೆಳೆಯ/ಗೆಳತಿಯರೊಂದಿಗೆ ಸುತ್ತಾಡಲು???) ಕಾರು ಕೊಡಿಸಲು ಹೆತ್ತವರನ್ನು ಪೀಡಿಸುತ್ತಾರೆ. ಎಲೆಕ್ಟ್ರಾನಿಕ್‍ ಮಾಧ್ಯಮಗಳ ಮೂಲಕ ಇಂದು ಜಗತ್ತಿನ ಎಲ್ಲಾ ಸರಕುಗಳ ಬಗ್ಗೆಯೂ ಮಾಹಿತಿ ದೊರೆಯುತ್ತಿದ್ದು ನಾವು ಕೆಲವೊಮ್ಮೆ ಅಗತ್ಯತೆಗೆ ಬದಲಾಗಿ ಪ್ರತಿಷ್ಟೆಗಾಗಿ ಖರೀದಿ ಮಾಡುತ್ತಿದ್ದೇವೆ. ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ’ಶಾಪಿಂಗ್‍’ನ್ನು ಹವ್ಯಾಸ ಎಂದು ನಮೂದಿಸುವುದರಲ್ಲಿ  ಏನೋ ಅವ್ಯಕ್ತ ಸಂತೋಷವನ್ನು ಅನುಭವಿಸುತ್ತಿದ್ದೇವೆ. ಈ ಬದಲಾವಣೆಗಳಿಗೆ ಮುಖ್ಯ ಕಾರಣ ಪಾಶ್ಚಿಮಾತ್ಯ ಸಂಸ್ಕೃತಿಯ (ಅಂಧ?) ಅನುಕರಣೆ. ಈ ಅನುಕರಣೆ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳದಿದ್ದರೂ ಪಾಶ್ಚಿಮಾತ್ಯ ಉಡುಪು ಧರಿಸುತ್ತೇವೆ. ಆಹಾರ ಪದ್ಧತಿಯಲ್ಲೂ ಬದಲಾವಣೆಯನ್ನು ಕಾಣುತ್ತೇವೆ. ಕೆಲವು ಸಂದರ್ಭಗಳಲ್ಲಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಸೆಳೆತ ಮತ್ತು ತನ್ನದು ಆಧುನಿಕ ಶೈಲಿಯ ಜೀವನ ಎಂದು ತೋರ್ಪಡಿಸುವ ತವಕ ನಮ್ಮ ಅಭಿರುಚಿಯನ್ನು ಕೊಂದುಬಿಡುತ್ತದೆ. ಇಷ್ಟೆಲ್ಲದರ ನಡುವೆ ಪಾಶ್ಚಿಮಾತ್ಯರಲ್ಲಿನ ಒಳ್ಳೆಯ ಅಂಶಗಳಾದ ಸಾಮಾಜಿಕ ಕಳಕಳಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಇತ್ಯಾದಿಗಳನ್ನು ನಾವು ತಪ್ಪಿಯೂ ಅಳವಡಿಸುವುದಿಲ್ಲ. ಈ ವಿಚಾರದಲ್ಲಿ ವಿದ್ಯಾವಂತರೂ ಅವಿದ್ಯಾವಂತರಾಗಿರುವುದು ನಿಜಕ್ಕೂ ಖೇದಕರ. ಇವುಗಳ ಜೊತೆಗೆ ಹಣ ಮಾಡುವ ಆತುರದಲ್ಲಿ ನಾವು ಮಾನವೀಯ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿದ್ದೇವೆಯೋ ಎಂದು ನನಗೆ ಅನಿಸುತ್ತದೆ. ಹಣದ ಮುಂದೆ ಸಂಬಂಧಗಳು ಕ್ಷೀಣಿಸುತ್ತಿವೆ. ಇವೆಲ್ಲಾ ಸ್ಥಿತ್ಯಂತರಗಳನ್ನು ಕಂಡಾಗ ಬದಲಾವಣೆ ಅಗತ್ಯವೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬದಲಾವಣೆ ಮತ್ತು ಆಧುನಿಕತೆ ನಮ್ಮ ವೈಚಾರಿಕತೆಯಲ್ಲಿ ಇರಬೇಕೇ ಹೊರತು ತೋರ್ಪಡಿಕೆಯಲ್ಲಿ ಅಲ್ಲ.