Thursday, July 23, 2015

ಅಲ್ಪಸಂಖ್ಯಾತ ವರ್ಗದಲ್ಲಿ ಗುರುತಿಸಲು ಮಾನದಂಡವೇನು?

ನಮ್ಮ ದೇಶದಲ್ಲಿ ಕೆಲವೊಂದು ಮತ/ಪಂಗಡಗಳನ್ನು ಅಲ್ಪಸಂಖ್ಯಾತ ವರ್ಗದಲ್ಲಿ ಗುರುತಿಸಿರುವುದು ನಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಹೀಗೆ ಈ ವರ್ಗದಲ್ಲಿ ಗುರುತಿಸಿರುವ ಮತ/ಪಂಗಡಗಳ ಜನರಿಗೆ ಸರಕಾರ ವಿಶೇಷ ಸವಲತ್ತುಗಳನ್ನು ನೀಡಿ ಅವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ (?). ಸಮಾಜದಲ್ಲಿ ಹಿಂದುಳಿದವರ ಅಭಿವೃದ್ಧಿ ಬಗೆಗಿನ ಕಾಳಜಿಯಿಂದ ಇಂತಹ ಕಾರ್ಯಕ್ರಮಗಳನ್ನು ಆರಂಭಿಸಿದ್ದರೂ ಕಾಲಕ್ರಮೇಣ ಇದು ರಾಜಕೀಯ ಲಾಭದ ವಸ್ತುವಾಗಿ ರುವುದು ದುರಂತ. . ಅಲ್ಲದೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂದರ್ಭದಲ್ಲಿ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯಿಂದ ಈ ಕೆಳಗಿನ ಪ್ರಶ್ನೆಗಳಿಗೆ ವಿವರಣೆಯನ್ನು ಬಯಸುತ್ತೇನೆ.

  • ಯಾವುದೇ ಮತ/ಪಂಗಡವನ್ನು ಅಲ್ಪಸಂಖ್ಯಾತ ವರ್ಗದಲ್ಲಿ ಗುರುತಿಸಲು ಬಳಸಿರುವ ಮಾನದಂಡವೇನು?
  • ಬಳಸಿರುವ ಮಾನದಂಡದ ಪರಾಮರ್ಶೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆಯೇ?
  • ಗುರುತಿಸುವಿಕೆ ಜನಸಂಖ್ಯೆಯ ಆಧಾರದಲ್ಲಿ ನಡೆದಿರುವುದೆ? ಹಾಗಾದಲ್ಲಿ ಅಲ್ಪಸಂಖ್ಯಾತ ವರ್ಗದಲ್ಲಿ ಗುರುತಿಸಲು ಇರುವ ಗರಿಷ್ಟ ಶೇಕಡಾವಾರು ಜನಸಂಖ್ಯಾ ಮಿತಿ ಏನು?

 

Tuesday, June 30, 2015

ಪರ್ಕಳದ ಗೋಳು ಕೇಳೋರು ಯಾರು?

ಉಡುಪಿಯನ್ನು ಕಾರ್ಕಳ ಹಾಗೂ ಆಗುಂಬೆಗೆ ಸೇರಿಸುವ ಹೆದ್ದಾರಿಯಲ್ಲಿ ಬರುವ ಚಿಕ್ಕ ಪಟ್ಟಣ ಈ ಪರ್ಕಳ. ಶಿಕ್ಷಣ ಕಾಶಿ ಮಣಿಪಾಲದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವುದರಿಂದ ಅಲ್ಲಿನ ಹೆಚ್ಚಿನ ಉದ್ಯೋಗಿಗಳು ಪರ್ಕಳದ ಆಸುಪಾಸಿನಲ್ಲಿ ವಾಸವಾಗಿದ್ದಾರೆ. ಅಲ್ಲದೆ ಪರ್ಕಳದಲ್ಲಿ ಹಾದು ಹೋಗುವ ಈ ಹೆದ್ದಾರಿ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗಿದೆ (ನಂ. ೧೬೯ಎ). ತೀರ್ಥಯಾತ್ರಿಗಳು ಉಡುಪಿಯಿಂದ ಧರ್ಮಸ್ಥಳಕ್ಕೆ ಹೋಗಬೇಕಾದರೆ ಈ ದಾರಿಯನ್ನೇ ಬಳಸುತ್ತಾರೆ. ಇಷ್ಟೆಲ್ಲಾ ಮಹತ್ವಗಳಿಂದ ಕೂಡಿರುವ ಈ ಹೆದ್ದಾರಿ ಪರ್ಕಳದ ಸುಮಾರು ೪೦೦ ಮೀ. ಅಂತರದಲ್ಲಿ ಇರುವ ಸ್ಥಿತಿಯಂತೂ ಶೋಚನೀಯ. ಅಗಲ ಕಿರಿದಾದ ಈ ಪ್ರದೇಶದಲ್ಲಿ ದಿನದ ಹೆಚ್ಚಿನ ಸಮಯದಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಚಾಲಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಸಮಯದಲ್ಲಂತೂ ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರುಅಂತರವನ್ನು ದಾಟಲು ಸಾಕಷ್ಟು ಸಮಯವನ್ನೇ ತೆಗೆದುಕೊಳ್ಳುತ್ತಾರೆ (ವ್ಯರ್ಥ ಗೊಳಿಸುತ್ತಾರೆ?). ಚರಂಡಿ ವ್ಯವಸ್ಥೆಯೂ ಸರಿ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆ ಇಮ್ಮಡಿಯಾಗುತ್ತದೆ. ಇಲ್ಲಿ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಕೆಸರು ನೀರಿನ ಸ್ನಾನ ಸಾಮಾನ್ಯದ ವಿಷಯವಾಗಿದೆ. ಎಲ್ಲಾ ಸಮಸ್ಯೆಗಳ ಸರಮಾಲೆಯ ಬಗ್ಗೆ ನಮ್ಮ ಅಧಿಕಾರಿಗಳಿಗಾಗಲಿ ಅಥವಾ ರಾಜಕಾರಣಿಗಳಿಗಾಗಲಿ ಗೊತ್ತಿಲ್ಲದಿಲ್ಲ. ಆದರೆ ಇದನ್ನು ಸರಿಪಡಿಸುವ ಇಚ್ಛಾಶಕ್ತಿಯನ್ನು ಉಡುಪಿ ಶ್ರೀ ಕೃಷ್ಣ ಇನ್ನೂ ಇವರಿಗೆ ದಯಪಾಲಿಸಿಲ್ಲ. ಇಂದು ದೇಶದ ಪ್ರಧಾನಿ ಸ್ಮಾರ್ಟ್ ಸಿಟಿಯ ಕನಸು ಕಾಣುತ್ತಿದ್ದರೆ ಪರ್ಕಳದ ನಿವಾಸಿಗಳು ಕನಿಷ್ಟ ಸೌಲಭ್ಯವಾದರೂ ಲಭಿಸಲಿ ಎಂದು ಹಂಬಲಿಸುತ್ತಿದ್ದಾರೆ. ಪ್ರದೇಶದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಾಜಕೀಯವನ್ನು ಬದಿಗಿಟ್ಟು, ಸಮಸ್ಯೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿ ಎಂದು ಆಶಿಸುತ್ತಾ ಅಂತಹ ಸದ್ಬುದ್ಧಿಯನ್ನು ಅವರಿಗೆ ನೀಡಲಿ ಎಂದು ಉಡುಪಿ ಶ್ರೀ ಕೃಷ್ಣನಲ್ಲಿ ಬೇಡಿಕೊಳ್ಳುತ್ತೇನೆ.