Wednesday, December 11, 2013

ಮಡೆ ಸ್ನಾನ - ಒಂದು ಅಭಿಪ್ರಾಯ


ನಂಬಿಕೆ ಎಂಬುದು ಮಾನವಕುಲದಷ್ಟೇ ಪುರಾತನವಾದುದು. ಎಲ್ಲಾ ಕಾಲದಲ್ಲೂ, ಜಗತ್ತಿನ ಎಲ್ಲಾ ಜನಾಂಗದಲ್ಲೂ, ಎಲ್ಲಾ ಧರ್ಮಗಳಲ್ಲೂ ಅವರದೇ ಆದ ನಂಬಿಕೆಗಳು ಇದ್ದವು ಮತ್ತು ಇಂದು ಕೂಡ ಇವೆ. ನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುವ ಗುಂಪು ಸಹ ಅಷ್ಟೇ ಇತಿಹಾಸವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಆಚರಣೆಗಳಲ್ಲಿ ಅಚಲ ನಂಬಿಕೆಯಿರುವ ಮತ್ತು ಪ್ರತಿಯೊಂದನ್ನೂ ಪ್ರಶ್ನಿಸುವ ಅಥವಾ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಗುಂಪುಗಳ ಮದ್ಯೆ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ’ಮಡೆ ಸ್ನಾನ’ ಇಂತಹ ವಿವಾದಿತ ಆಚರಣೆಗಳಲ್ಲಿ ಒಂದು.

ನನ್ನ ಅಭಿಪ್ರಾಯದ ಪ್ರಕಾರ ’ನಂಬಿಕೆ’ ಎಂಬ ಶಬ್ಧವೇ ತಿಳಿಸುವಂತೆ ಅದು ವೈಜ್ಞಾನಿಕ ಪ್ರಯೋಗ ಅಥವಾ ಅಧ್ಯಯನಗಳ ಮೂಲಕ ಸಾಧಿಸಲಾಗದ ವಿಷಯ. ಹಾಗೇನಾದರೂ ಸಾಧಿಸಲು ಸಾದ್ಯವಾದರೆ ಆಗ ಅದು ’ನಂಬಿಕೆ’ ಎಂಬುದರ ಬದಲು ’ಸತ್ಯ’ ಎಂದು ಕರೆಯಲು ಯೋಗ್ಯವೆನಿಸುತ್ತದೆ. ಆದುದರಿಂದ ಮೊತ್ತ ಮೊದಲನೆಯದಾಗಿ ನಂಬಿಕೆಯನ್ನು ವೈಜ್ಞಾನಿಕತೆಯ ದುರ್ಬೀನಿನಿಂದ ನೋಡುವುದನ್ನು ನಿಲ್ಲಿಸಬೇಕು. ನಂಬಿಕೆಗಳು ಆಯಾ ಪ್ರದೇಶಗಳಲ್ಲಿ ಅಲ್ಲಿನ ಸನ್ನಿವೇಶ ಮತ್ತು ಸಂದರ್ಭಕ್ಕೆ ಸರಿಯಾಗಿ ಹುಟ್ಟಿಕೊಂಡಂತಹುಗಳು. ಆದುದರಿಂದ ಅವು ಸಾರ್ವಕಾಲಿಕ ಅಥವಾ ಸಾರ್ವತ್ರಿಕವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಂಬಿಕೆಗಳು ಮತ್ತು ಅದಕ್ಕನುಗುಣವಾಗಿ ಹುಟ್ಟಿಕೊಂಡ ಆಚರಣೆಗಳು ಕಾಲಾಂತರದಲ್ಲಿ ಮಾರ್ಪಾಡು ಹೊಂದುವುದು ಇಲ್ಲವೇ ಸನ್ನಿವೇಶ ಮತ್ತು ಸಂದರ್ಭಕ್ಕನುಸಾರವಾಗಿ ಅವುಗಳನ್ನು ಮಾರ್ಪಾಡುಗೊಳಿಸುವುದು ಸರಿಯಾಗಿಯೇ ಇದೆ. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಮಡೆ ಸ್ನಾನವನ್ನು ಈ ಮೇಲೆ ವಿವರಿಸಿದ ರೀತಿಯಲ್ಲಿ ನೋಡುತ್ತಿದ್ದರೆ ಅದು ಇಷ್ಟೊಂದು ವಿವಾದದ ವಿಷಯವಾಗುತ್ತಿರಲಿಲ್ಲ. ಅನಾದಿ ಕಾಲದಿಂದ ನಡೆದು ಬಂದ ಆಚರಣೆ ಎಂಬ ಏಕೈಕ ವಾದಕ್ಕೆ ಅಂಟಿಕೊಂಡು, ಅದು ಇಂದಿಗೆ ಪ್ರಸ್ತುತವೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತಯಾರಿರದ ಗುಂಪು ಒಂದು ಕಡೆಯಿದ್ದರೆ, ಇನ್ನು ಅದಕ್ಕೆ ಜಾತಿಯ ಲೇಪನ ಮಾಡಿ ಸಮಾಜದಲ್ಲಿ ಗೊಂದಲ-ಒಡಕು ಮೂಡಿಸುವ ಮೂಲಕ ತಮ್ಮ ಲಾಭಕ್ಕಾಗಿ ಇದನ್ನು ವಿರೋಧಿಸುವ (ಉಪಯೋಗಿಸುವ?) ಗುಂಪು ಇನ್ನೊಂದು ಕಡೆಯಿದೆ. ಇವರನ್ನು ಒಂದೆಡೆ ಸೇರಿಸಿ ಚರ್ಚಿಸುವ ವೇದಿಕೆ ಕಲ್ಪಿಸಲು ಕೆಲವು ಗಣ್ಯರು ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಇನ್ನು ಈ ಪದ್ಧತಿಯನ್ನು ಆಚರಿಸುವ ಮಂದಿ ಯಾರದೋ ಒತ್ತಡಕ್ಕೆ ಇದನ್ನು ಮಾಡುತ್ತಿಲ್ಲ ಮತ್ತು ಅವರಲ್ಲಿ ಎಲ್ಲಾ ಜಾತಿಯ ಮಂದಿಯೂ ಇದ್ದಾರೆ ಎಂಬುದೂ ಗಮನಿಸಬೇಕಾದ ವಿಷಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದರ ಬಗೆಗಿನ ವಸ್ತುನಿಷ್ಠ ಚಿಂತನೆ ಅಗತ್ಯವೆಂಬುದು ನನ್ನ ಅಭಿಪ್ರಾಯ. ಆಚರಣೆಯ ಇತಿಹಾಸವನ್ನು ಕೆದಕುವುದರ ಬದಲು ಇಂದಿನ ಸಮಾಜ ಮತ್ತು ನಾಗರಿಕತೆಗೆ ಇದು ಪ್ರಸ್ತುತವೋ ಎಂಬ ಪ್ರಶ್ನೆ ಮಹತ್ವದ್ದಾಗಿದೆ. ಅಲ್ಲದೆ ಇದನ್ನು ಕಾನೂನಿನ ಮೂಲಕ ನಿಷೇಧಿಸುವುದರ ಬದಲು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವುದರ ಜೊತೆಗೆ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಸಹಕಾರಿಯಾದೀತು. ಈ ನಿಟ್ಟಿನಲ್ಲಿ ಎರಡೂ ಗುಂಪುಗಳು ಚಿಂತಿಸಲಿ ಎಂಬುದೇ ನನ್ನ ಹಾರೈಕೆ.

Friday, June 21, 2013

ಜಾತಿ, ಧರ್ಮ ಮತ್ತು ರಾಜಕೀಯ

ಬಾಲ್ಯದಿಂದಲೂ ನನ್ನಲ್ಲಿ ಗೊಂದಲ ಮೂಡಿಸಿದ ಪದ ’ಜಾತ್ಯಾತೀತತೆ’ ಅಥವಾ secularism. ಪ್ರಾಥಮಿಕ ಶಾಲಾ ಹಂತದಲ್ಲಿ ನಾವು ಗುರುಗಳಿಂದ ತಿಳಿದ ಪ್ರಕಾರ ಜಾತಿಯನ್ನು ಮೀರಿದ ಸಮಾಜ ಅಥವಾ ರಾಷ್ಟ್ರವನ್ನು ಜಾತ್ಯಾತೀತ ಸಮಾಜ ಅಥವಾ ರಾಷ್ಟ್ರ ಎನ್ನುತ್ತೇವೆ. ಅಂದರೆ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಜಾತಿ ವ್ಯವಸ್ಥೆಯಿಂದ ಹೊರಗಿಡುವುದು ಎಂದರ್ಥ. ವಿಕಿಪೀಡಿಯದಲ್ಲಿ ಕಂಡಂತೆ ಇದರ ವಿವರಣೆ ಹೀಗಿದೆ - Secularism is the principle of separation of government institutions, and the persons mandated to represent the State, from religious institutions and religious dignitaries. ಆದರೆ ನಮ್ಮಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಯಾಕೋ ಈ ವಿವರಣೆ ಹೊಂದಿಕೆಯಾಗುತ್ತಿಲ್ಲ. ನಮ್ಮ ನಾಯಕರ ತಪ್ಪು ಗ್ರಹಿಕೆಯೊ ಅಥವಾ ಅವರ ಅನುಕೂಲಕ್ಕಾಗಿ ಇದನ್ನು ಮಾರ್ಪಾಡು ಮಾಡಿಕೊಂಡಿರುವುದೊ, ಒಟ್ಟಿನಲ್ಲಿ ನಮ್ಮ ಜಾತ್ಯಾತೀತ ವ್ಯವಸ್ಥೆ ಹಳಿ ತಪ್ಪಿದೆ. ಸ್ವಾತಂತ್ರ್ಯೋತ್ತರ ಭಾರತ ಧರ್ಮ, ಮತ ಮತ್ತು ಜಾತಿಯ ನಡುವಿರುವ ವ್ಯತ್ಯಾಸವನ್ನು ತಿಳಿಯುವಲ್ಲಿ ವಿಫಲವಾಗಿದೆ. ’ಧರ್ಮ’ ಎನ್ನುವುದು ಆಂಗ್ಲ ಪದವಾದ ’religion'ಗೆ ಸಮಾನಾರ್ಥಕವಾಗಿ ಪ್ರಯೋಗಿಸಲ್ಪಡುತ್ತಿದೆ. ಆದರೆ ಧರ್ಮ ಇದಕ್ಕಿಂತ ವಿಶಾಲವಾದ ಅರ್ಥ ಮತ್ತು ವ್ಯಾಪ್ತಿಯನ್ನು ಹೊಂದಿದೆ. ಧರ್ಮದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ವಿವರಣೆ ಈ ಕೆಳಗಿನಂತಿದೆ -

The English word ‘religion’ does not fully convey the Indian concept of religion. Hindus believe in Vedas. The word ‘Dharma’ has a very wide meaning. One meaning of it is the ‘moral values or ethics’ on which the life is naturally regulated. Dharma or righteousness is elemental and fundamental in all nations, periods and times. For example truth, love, compassion are human virtues. This is what Hindu call Sanatan Dharma meaning religion which is immutable, constant, living permanent and ever in existence. (http://www.ncert.nic.in/html/pdf/schoolcurriculum/ncfsc/judge51_80.pdf)

ಧರ್ಮವು ನಮ್ಮ ಜೀವನ ಪದ್ಧತಿಯನ್ನು ನಿರೂಪಿಸಿದರೆ, ಮತ/ಪಂಗಡವು ಅದರ ಸ್ಥಾಪಕರ ಚಿಂತನೆ/ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಇನ್ನು ಜಾತಿ ಪದ್ಧತಿಯು ವಿವಿಧ ಉದ್ಯೋಗಗಳನ್ನು ನಿರ್ವಹಿಸುವ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸಲು ಹುಟ್ಟಿಕೊಂಡ ವ್ಯವಸ್ಥೆಯಾಗಿದ್ದು ಕಾಲಾಂತರದಲ್ಲಿ ಇದು ಭಿನ್ನ ರೂಪವನ್ನು ಪಡೆದುಕೊಂಡಿತು. ಇತ್ತೀಚಿನ ವರ್ಷಗಳಲ್ಲಂತೂ ಇದು ಜಾತಿ ಸಂಘರ್ಷಕ್ಕೆ ಎಡೆಮಾಡಿದೆ. ಅಲ್ಲದೆ ಜಾತಿ, ಮತ, ಧರ್ಮಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿರುವ ರಾಜಕಾರಣಿಗಳು ವ್ಯವಸ್ಥೆಯನ್ನು ಹದಗೆಡಿಸುವುದಕ್ಕೆ ಕೊಟ್ಟ/ಕೊಡುತ್ತಿರುವ ಕೊಡುಗೆ ಗಣನೀಯ! ಇಂದು ಪಂಚಾಯತ್ ಚುನಾವಣೆಯಿಂದ ಹಿಡಿದು ಸಾರ್ವತ್ರಿಕ ಚುನಾವಣೆಯವರೆಗೂ ಅಭ್ಯರ್ಥಿಗಳ ಆಯ್ಕೆ ನಡೆಯುವುದು ಜಾತಿ/ಮತದ ಆಧಾರದಿಂದಲೇ ಹೊರತು ಅರ್ಹತೆಯ ಮಾನದಂಡದಿಂದಲ್ಲ. ಇದು ಪಕ್ಷ ಬೇಧವಿಲ್ಲದೆ ನಡೆಯುತ್ತಿರುವ ಪ್ರಕ್ರಿಯೆ. ಮಾದ್ಯಮವೂ ಈ ವಿಚಾರದಲ್ಲಿ ಎಡವಿದೆ ಎನ್ನುವುದು ಸತ್ಯ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಾಗಲೂ ಜಾತಿವಾರು ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತವೆಯೇ ಹೊರತು ಆಯ್ಕೆಗೊಂಡ ಅಭ್ಯರ್ಥಿಗಳ ಅರ್ಹತೆ, ಸಾಧನೆ ಅಥವಾ ಸಾಧಿಸುವ ಸಾಮರ್ಥ್ಯದ ಬಗೆಗಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಜನನಾಯಕರ ಸಂಖ್ಯೆ ಕ್ಷೀಣಿಸುತ್ತಿದ್ದು ಹೆಚ್ಚಿನ ರಾಜಕಾರಣಿಗಳು ಅವರು ಅನುಸರಿಸುವ ಮತ/ವರ್ಗದ ಪ್ರತಿನಿಧಿಗಳಾಗಿದ್ದಾರೆ. ಸಹಜವಾಗಿ ಅವರು ತಮ್ಮ ವರ್ಗ ಅಥವಾ ತಮ್ಮನ್ನು ಬೆಂಬಲಿಸುತ್ತಿರುವ (ಹಾಗೆಂದು ನಂಬಿರುವ?) ವರ್ಗಕ್ಕೆ ಸಹಾಯ ಮಾಡುವುದರಲ್ಲಿ ತಮ್ಮ ಅಧಿಕಾರಾವಧಿಯನ್ನು ಕಳೆಯುತ್ತಿದ್ದಾರೆ. ಇಂತಹ ರಾಜಕಾರಣಿಗಳು ತಮ್ಮವರಿಗಾಗಿ ಸೃಷ್ಠಿಸಿದ ಮೀಸಲು, ಒಳಮೀಸಲು ಎಂಬ ವಿಷ ವರ್ತುಲದಲ್ಲಿ ಗುಣಮಟ್ಟ, ಸಾಮರ್ಥ್ಯ ಎಂಬಿತ್ಯಾದಿ ಅಂಶಗಳು ಕಳೆದುಹೋಗಿವೆ. ಅಲ್ಲದೆ ಮೀಸಲಾತಿಯ ಸೌಲಭ್ಯವು ಅದಕ್ಕೆ ಅರ್ಹರಾದ, ಸಮಾಜದಲ್ಲಿ ನಿಜಕ್ಕೂ ಶೋಷಣೆಗೊಳಗಾದ ಜನರನ್ನು ತಲುಪಿದೆಯೇ ಎಂಬುದು ಅಧ್ಯಯನ ಯೋಗ್ಯ ವಿಷಯವಾಗಿದೆ. ಒಟ್ಟಿನಲ್ಲಿ ನಮ್ಮ ರಾಜಕೀಯ ಮತ್ತು ಆಡಳಿತದಲ್ಲಿ ಧರ್ಮ ಮಾಯವಾಗಿದ್ದು ಜಾತಿ/ಮತ/ವರ್ಗ ಎಲ್ಲವನ್ನೂ ಆಕ್ರಮಿಸಿದೆ. ಇದರಿಂದಾಗಿ ರಾಜಕೀಯವನ್ನು ಧರ್ಮವಾಗಿ ಸ್ವೀಕರಿಸಿದ ಸಮರ್ಥ ನಾಯಕರೂ ಕೂಡ ಅಸಹಾಯಕರಾಗಿದ್ದಾರೆ. ಇವರ ಕಾಳಜಿ ಯಾರಿಗೂ ಅರ್ಥವಾಗುತ್ತಿಲ್ಲ ಇಲ್ಲವೇ ಪಥ್ಯವಾಗುತ್ತಿಲ್ಲ. ಆದರೂ ಇಂತಹ ಜನನಾಯಕರು ಎದೆಗುಂದಬೇಕಾಗಿಲ್ಲ. ಧರ್ಮೋ ರಕ್ಷತಿ ರಕ್ಷಿತಃ.

(ದಿನಾಂಕ ೨೫.೦೬.೨೦೧೩ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

Sunday, June 2, 2013

ಉಪನ್ಯಾಸಕರಾಗಲು ಯುಜಿಸಿ – ರಾ. ಅರ್ಹತಾ ಪರೀಕ್ಷೆ ಮಾನದಂಡವೇ?


ಸಮಯವನ್ನು ಮೀಟರಿನಲ್ಲಿ ಅಥವಾ ದೂರವನ್ನು ನಿಮಿಷಗಳಲ್ಲಿ ಅಳೆಯುತ್ತೇನೆ ಎಂದರೆ ಆ ವ್ಯಕ್ತಿ ಅಪಹಾಸ್ಯಕ್ಕೀಡಾಗಬಹುದು. ಏಕೆಂದರೆ ಪ್ರತಿಯೊಂದು ಅಂಶವನ್ನು ಅಳೆಯಲು ಅದಕ್ಕೆ ತಕ್ಕುದಾದ ಮಾನವನ್ನು ಮೊದಲೇ ನಿರ್ಧರಿಸಿರುತ್ತೇವೆ. ಆ ಮಾನದಿಂದಲೇ ಆ ಅಂಶವನ್ನು ಅಳೆಯಬೇಕೇ ಹೊರತು ಬೇರೊಂದರಿಂದಲ್ಲ. ಅಲ್ಲದೆ ಮಾನವನ್ನು ನಿರ್ಧರಿಸುವಾಗ ಆ ಅಂಶವನ್ನು ಅದು ಪ್ರತಿನಿಧಿಸುತ್ತದೆಯೋ ಎಂಬುದನ್ನು ಗಮನಿಸಬೇಕಾಗುತ್ತದೆ. ಯಾಕೆ ಇದನ್ನು ಪ್ರಸ್ತಾಪಿಸುತ್ತೀದ್ದೇನೆಂದರೆ, ಪ್ರಸ್ತುತ ನಿಯಮದ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸಕರಾಗುವ ಅರ್ಹತೆ ಪಡೆಯಲು, ಆ ವ್ಯಕ್ತಿ ಯುಜಿಸಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಅಥವಾ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್ಎಲ್ಇಟಿ) ಪಾಸಾಗಿರಬೇಕು. ಆಗ ಮಾತ್ರ ಆ ವ್ಯಕ್ತಿ ಉಪನ್ಯಾಸಕ ಹುದ್ದೆಗೆ ಅರ್ಹನಾಗುತ್ತಾನೆ. ಈ ಪರೀಕ್ಷೆಯ ವ್ಯಾಪ್ತಿಯನ್ನು ವಿಶ್ಲೇಷಣೆ ನಡೆಸಿದರೆ ಮೇಲಿನ ಹೇಳಿಕೆಗೆ ಇದು ಅತ್ಯಂತ ಸಮೀಪದಲ್ಲಿದೆ ಎಂದೆನಿಸುತ್ತದೆ. ಏಕೆಂದರೆ ಇದರ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಪರೀಕ್ಷಾರ್ಥಿಯ ವಿಷಯ ಜ್ಞಾನವನ್ನು ಪರೀಕ್ಷಿಸುವಂತಿರುತ್ತವೆಯೇ ಹೊರತು ಆತನ ಬೋಧನಾ ಕೌಶಲವನ್ನು ಅಲ್ಲ. ಅಲ್ಲದೆ ಈ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡಿರುವ ಮೀಸಲಾತಿ ಸಮರ್ಥನೀಯವಲ್ಲ. ಒಲಿಂಪಿಕ್ ಕ್ರೀಡಾ ಕೂಟದ ೧೦೦ ಮೀ. ಓಟದಲ್ಲಿ ಹಿಂದುಳಿದ ರಾಷ್ಟ್ರಗಳ ಸ್ಪರ್ಧಾಳುಗಳು ೫೦ ಮೀ. ಮಾತ್ರ ಓಡಿದರೆ ಸಾಕು ಎಂದು ನಿಯಮ ತರುವುದು ಸರಿಯೆ? ಅದಕ್ಕೆ ಬದಲಾಗಿ ಅವರ ತರಬೇತಿಗೆ ವಿಶೇಷ ಧನ ಸಹಾಯ ನೀಡಬಹುದು. ಅದೇ ರೀತಿ ಹಿಂದುಳಿದವರು ಕಲಿಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ಅವರಿಗೆ ಪರೀಕ್ಷೆಯಲ್ಲಿ ರಿಯಾಯಿತಿ ನೀಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಉಪನ್ಯಾಸಕರಾಗುವ ಅರ್ಹತೆ ಗಳಿಸುವ ದಾರಿಯಲ್ಲಿಯೇ ಇಂತಹ ನ್ಯೂನತೆಗಳಿರಲು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ? ಆದುದರಿಂದ ನ್ಯೂನತೆಗಳನ್ನು ಸರಿಪಡಿಸಲು ತಜ್ಞರ ಸಲಹೆ ಪಡೆದು ಸೂಕ್ತ ಮಾರ್ಪಾಡುಗಳನ್ನು ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಗುಣಮಟ್ಟದ ಉನ್ನತ ಶಿಕ್ಷಣ ಮರೀಚಿಕೆಯಾದೀತು.
(ಈ ಲೇಖನವು ೦೮.೧೨.೨೦೦೪ರ ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)