Wednesday, October 11, 2017

ದೀಪಾವಳಿಯನ್ನು ಪಟಾಕಿ ಸದ್ದಿನ ಬದಲಾಗಿ ಹಣತೆಯ ಬೆಳಕಿನೊಂದಿಗೆ ಆಚರಿಸೋಣ

ಹಬ್ಬಗಳ ರಾಜ ಅಥವಾ ಹಬ್ಬಗಳ ಹಬ್ಬ ಎನಿಸಿಕೊಂಡ ದೀಪಾವಳಿ ಸಮೀಪಿಸುತ್ತಿದೆ. ಪ್ರತಿ ವರ್ಷ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತಿದ್ದರು ಹಬ್ಬ ಎಂದಾಕ್ಷಣ ನೆನಪಿಗೆ ಬರುವುದು ದೀಪಾವಳಿ. ರಾಮಾಯಣದಲ್ಲೂ ಉಲ್ಲೇಖವಿರುವ ದೀಪಾವಳಿಯ ಸಂಭ್ರಮ ವರ್ಣನಾತೀತ. ಹೊಸ ಬಟ್ಟೆ, ವಿವಿಧ ತಿಂಡಿ ತಿನಿಸುಗಳು, ರಂಗೋಲಿ ಅಲಂಕಾರ, ಹಣತೆಯ ಸಾಲುಗಳು... ಹೀಗೆ ಸಂಭ್ರಮದ ಆಚರಣೆಗೆ ಹಲವು ಕಾರಣಗಳು ಇವೆ. ಇವೆಲ್ಲದರ ಜೊತೆಗೆ ದೀಪಾವಳಿ ಆಚರಣೆಗೆ ಹೊಸ ಮೆರುಗನ್ನು ನೀಡಿದ್ದು ಆಕರ್ಷಣೀಯ ಪಟಾಕಿಗಳು. ವಿವಿಧ ಬಣ್ಣಗಳ ಬೆಳಕಿನ ಚಿತ್ತಾರವನ್ನು ಮೂಡಿಸುವ ಪಟಾಕಿಯ ಬಗ್ಗೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಏನೋ ಆಕರ್ಷಣೆ. ಇತ್ತೀಚಿನ ಕೆಲವು ವರ್ಷಗಳಲ್ಲಂತೂ ದೀಪಾವಳಿ ಆಚರಣೆ ಎಂದರೆ ಪಟಾಕಿ ಸಿಡಿಸುವುದು ಎಂಬ ಭಾವನೆ ಬರುವಷ್ಟು ಹಂತ ತಲುಪಿದೆ ನಮ್ಮ ಪಟಾಕಿ ವ್ಯಾಮೋಹ. ಪಟಾಕಿಯ ಸದ್ದಿನಲ್ಲಿ ದೀಪಾವಳಿಯ ಆಚರಣೆ ಕಳೆದು ಹೋಗಿದೆ ಎಂದರೂ ತಪ್ಪಾಗದು. ಪಟಾಕಿಯ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದು ಸತ್ಯವಾದರೂ ಅದರ ಇತರ  ಪರಿಣಾಮಗಳ ಬಗ್ಗೆಯೂ ಯೋಚಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಪಟಾಕಿ ಸಿಡಿತದಿಂದ ಪ್ರತಿ ವರ್ಷ ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುವವರು ಹಲವು ಮಂದಿ. ಇನ್ನು ಪಟಾಕಿ ಉಂಟುಮಾಡುವ ಪರಿಸರ ಮಾಲಿನ್ಯವೂ ಗಣನೀಯ. ಇವೆಲ್ಲವನ್ನೂ ಗಮನಿಸಿದಾಗ ಹಬ್ಬದ ಆಚರಣೆಗೆ ಪಟಾಕಿ ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಭೂಮಿ,ಗಿಡ, ಮರ, ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಹಿಂದೂ ಧರ್ಮದ ಪರಿಸರ ಕಾಳಜಿ ಪ್ರಶಂಸನೀಯ . ಸಕಲ ಚರಾಚರ ಗಳಲ್ಲೂ ದೇವರನ್ನು ಕಾಣುವ ನಾವು ಅವುಗಳಿಗೆ ಹಾನಿಯನ್ನು ಉಂಟು ಮಾಡುವುದು ಸರಿಯೇ . ಆದುದರಿಂದ ಸಲದ ದೀಪಾವಳಿಯನ್ನು ಪಟಾಕಿ ಸದ್ದಿನ ಬದಲಾಗಿ ಹಣತೆಯ ಬೆಳಕಿನೊಂದಿಗೆ ಆಚರಿಸೋಣ.

Thursday, July 27, 2017

ಆಚಾರವೇ ಸ್ವರ್ಗ, ಅನಾಚಾರವೇ ನರಕ…


ಶಾಲಾ ದಿನಗಳಿಂದಲೂ ನಾವು ಬಸವಣ್ಣನವರ ವಚನಗಳನ್ನು ಕೇಳಿದ್ದೇವೆ. ಕನ್ನಡದ ಅಧ್ಯಾಪಕರು ವಚನಗಳಿಗೆ ನೀಡುತ್ತಿದ್ದ ಅರ್ಥ ವಿವರಣೆ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಬಸವಣ್ಣನವರ "ಕಾಯಕವೇ ಕೈಲಾಸ" ಎನ್ನುವ ತತ್ವ ಎಲ್ಲ ಧರ್ಮೀಯರಿಗೂ ಅನುಸರಣೀಯ. ಕರ್ಮಯೋಗಿಯಾದ ಬಸವಣ್ಣನವರು ತಮ್ಮ ತತ್ವಗಳ ಮೂಲಕ ಸಮಸ್ತ ಮನುಕುಲವನ್ನು ತಲುಪಿದ್ದಾರೆ ಎಂದರೆ ತಪ್ಪಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ತತ್ವಗಳು ರಾಜಕೀಯದ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ನೋವನ್ನು ತಂದಿದೆ. ಮತ ಪಂಥಗಳನ್ನು ಮೀರಿ ಬದುಕಿದ ಬಸವಣ್ಣನವರ ಹೆಸರಿನಲ್ಲಿ ಮತವೊಂದನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿರುವುದು ಅರಗಿಸಿಕೊಳ್ಳಲಾಗದ ವಿಚಾರ. ನನ್ನ ಜ್ಞಾನ ವ್ಯಾಪ್ತಿಯಲ್ಲಿ ವಿಶ್ಲೇಷಿಸುವುದಾದರೆ ಬಸವಣ್ಣನವರು ಎಂದೂ ದೇವರನ್ನು ಆರಾಧಿಸಬೇಡಿ ಎಂದು ಹೇಳಿಲ್ಲ . ಆದರೆ ಆರಾಧಿಸುವ ರೀತಿಯನ್ನು ಬದಲಾಯಿಸಿ ಎಂದು ಕರೆ ನೀಡಿದರು. ಅದ್ಧೂರಿಯ ಧಾರ್ಮಿಕ ಆಚರಣೆಗಳಿಗಿಂತ ಸಮಾಜಮುಖಿ ಸೇವೆಗಳು ಬಹಳ ಮುಖ್ಯ ಎಂದು ಹೇಳಿದರು. ಜಾತೀಯತೆ ಮತ್ತು ಲಿಂಗ ಅಸಮಾನತೆಯಂತಹ ಪಿಡುಗುಗಳ ನಿವಾರಣೆಗೆ ಶ್ರಮಿಸಿದ ಅವರು ಸಮಾಜ ಸುಧಾರಕರಾಗಿ ಬಾಳಿದರೆ ಹೊರತು ಮತ ಪ್ರಚಾರಕರಾಗಿ ಅಲ್ಲ. ಇಂತಹ ಮಹಾನ್ ಮಾನವತಾವಾದಿಯನ್ನು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮತವೊಂದರ ನಾಯಕರಂತೆ ಕಾಣುವುದು ಎಷ್ಟು ಸರಿ ? ಜಾತಿ ಪಂಥದ ನಿವಾರಣೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರ ಹೆಸರಲ್ಲಿ ಪಂಥವನ್ನು ಸ್ಥಾಪಿಸುವುದು ಅವರಿಗೆ ಮಾಡುವ ಅವಮಾನ ಅಲ್ಲವೇ ? ಸ್ವಾರ್ಥ ಸಾಧನೆಗಾಗಿ ಸಮಾಜವನ್ನು ಒಡೆಯುವುದು ಅನಾಚಾರ ಎಂದು ನನ್ನ ಖಚಿತ ಅಭಿಪ್ರಾಯ. ಅಷ್ಟಕ್ಕೂ ಬಸವಣ್ಣ ಹೇಳಿದ್ದೇನು? ಆಚಾರವೇ ಸ್ವರ್ಗ, ಅನಾಚಾರವೇ ನರಕ…
(ದಿನಾಂಕ 31.07.2017ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)