Saturday, November 5, 2016

ಪಂಕ್ತಿ ಬೇಧ

ಇತ್ತೀಚೆಗೆ ಭೋಜನದಲ್ಲಿ ಪಂಕ್ತಿ ಬೇಧದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಪರ ಮತ್ತು ವಿರೋಧಿ ಬಣಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿವೆ. ಆಧುನಿಕ ಸಮಾಜದಲ್ಲಿ ಅಸಮಾನತೆಯನ್ನು ಸಹಿಸಲು ಸಾಧ್ಯವಿಲ್ಲ. ಆದುದರಿಂದ ಜಾತಿಯಾಧಾರಿತವಾಗಿ ಯಾವುದೇ ವ್ಯಕ್ತಿಯನ್ನು ಉನ್ನತ ಅಥವಾ ನೀಚ ಎಂದು ನಿರ್ಧರಿಸುವುದು ಖಂಡಿತಾ ತಪ್ಪು ಮತ್ತು ಯಾವುದೇ ರೀತಿಯ ಸಾಂಪ್ರದಾಯಿಕ ವಿವರಣೆಗಳನ್ನು ಒಪ್ಪಲಾಗದು. ಆದುದರಿಂದ ಸಮಾನತೆಗಾಗಿನ ಹೋರಾಟ ಸರಿಯಾಗಿದೆ. ಆದರೆ ಇತ್ತೀಚಿನ ಕೆಲವು ಘಟನಾವಳಿಗಳು ಸಮಾನತೆಯಾಚೆಗಿನ ಉದ್ದೇಶಗಳೊಂದಿಗೆ ಈ ಹೋರಾಟ ನಡೆಯುತ್ತಿದೆಯೋ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಏಕೆಂದರೆ ಹೋರಾಟದ ಮುಂಚೂಣೆಯಲ್ಲಿರುವವರಿಗೆ ನೊಂದವರ ಬಗೆಗಿನ ಕಾಳಜಿಗಿಂತ ರಾಜಕೀಯ ಲಾಭವೇ ಮುಖ್ಯವಾಗಿಬಿಟ್ಟಿದೆ. ಅಲ್ಲದೆ ಸಮಾನತೆ ಮತ್ತು ಆದಿವಾಸಿ ಜನರ ಪರವಾಗಿ ದುಡಿಯುತ್ತಿರುವ ಕೆಲವು ಸಂಘಟನೆಗಳನ್ನು ಈ ಹೋರಾಟಗಾರರು ವಿರೋಧಿಸುತ್ತಿರುವುದು ಏಕೆ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ. ಜಾತಿಯಾಧಾರಿತ ಭೋಜನ ಪಂಕ್ತಿಯನ್ನು ವಿರೋಧಿಸುವ ಮಂದಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಜಾತಿಯಾಧಾರಿತ ಮೀಸಲಾತಿಯನ್ನು ಸಮರ್ಥಿಸುವುದನ್ನು ಅರ್ಥೈಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಈ ಹೋರಾಟ ರಾಜಕೀಯ ಅಸ್ಥಿತ್ವಕ್ಕಾಗಿ ಕೆಲವು ನಾಯಕರು ನಡೆಸುವ ನಾಟಕದಂತೆ ಭಾಸವಾಗುತ್ತದೆ. ಸಮಾನತೆಯ ಬಗ್ಗೆ ಇರುವ ಕಾಳಜಿ ನೈಜವಾಗಿದ್ದಲ್ಲಿ ಈ ನಾಯಕರು ಕನಿಷ್ಟ ಪಕ್ಷ ಜಾತಿಯಾಧಾರಿತ ಮೀಸಲಾತಿಯನ್ನು ಒಂದು ತಲೆಮಾರಿಗೆ ಸೀಮಿತಗೊಳಿಸುವ ಬಗ್ಗೆಯಾದರೂ ಆಲೋಚಿಸುವುದು ಸೂಕ್ತ. ಆಗ ಮೀಸಲಾತಿ ಸೌಲಭ್ಯವು ಅರ್ಹರಿಗೆ ತಲುಪುವಂತಾಗುತ್ತದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿಯ ಜನರನ್ನು ಮೀಸಲಾತಿಯ ಅಡಿಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಸಮಾಜ ಮತ್ತು ಸರಕಾರದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸುವವರನ್ನು ನಾವು ಬೆಂಬಲಿಸೋಣ. ಪಂಕ್ತಿ ಬೇಧದ ವಿರುದ್ಧದ ಹೋರಾಟ ಕೇವಲ ಭೋಜನಕ್ಕಷ್ಟೇ ಸೀಮಿತವಾಗದೆ ಉದ್ಯೋಗ ಮತ್ತು ಶಿಕ್ಷಣದಂತಹ ಕ್ಷೇತ್ರದಲ್ಲೂ ನಡೆಯಲಿ.

Saturday, July 30, 2016

ಅಣ್ಣಾ ಮಲೈ ಎಂಬ ದಕ್ಷ ಪೋಲಿಸ್ ಅಧಿಕಾರಿ

'ಅಣ್ಣಾ ಮಲೈ' , ಇದು ಉಡುಪಿ ಜಿಲ್ಲೆಯ ನಿವಾಸಿಗಳಿಗೆ ಚಿರಪರಿತವಾದ ಹೆಸರು. ೨೦೧೫ರ ಜನವರಿ ೧ರಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ೨೦೧೧ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಈ ಅಣ್ಣಾ ಮಲೈ. ಕೇವಲ ಒಂದೂವರೆ ವರ್ಷದ ಅಲ್ಪಾವಧಿಯಲ್ಲಿ ಜನಮಾನಸದಲ್ಲಿ ನಿಲ್ಲುವಂತಹ ರೀತಿಯಲ್ಲಿ ಅಧಿಕಾರ ನಿರ್ವಹಿಸಿದ ಇವರು ಇಂದು ಯುವಜನರ ಪಾಲಿಗೆ 'ಹೀರೋ' ಆಗಿದ್ದರೆ ಅದಕ್ಕೆ ಕಾರಣ ಅವರ ನಿಷ್ಪಕ್ಷಪಾತವಾದ ಅಧಿಕಾರ ನಿರ್ವಹಣೆ ಮತ್ತು ಜನಪರ ಕಾಳಜಿ. ತಮ್ಮ ಅಧಿಕಾರದ ಅವಧಿಯಲ್ಲಿ ಕಳಂಕ ರಹಿತರಾಗಿದ್ದ ಅವರು ಇತ್ತೀಚೆಗೆ ಚಿಕ್ಕಮಗಳೂರಿಗೆ ವರ್ಗಗೊಂಡಿರುವುದು ಆ ಜಿಲ್ಲೆಯ ಜನರ ಅದೃಷ್ಟ ಎನ್ನಬಹುದು. ಸಾಮಾನ್ಯವಾಗಿ ಜನರು ಪೋಲಿಸ್ ಇಲಾಖೆಯನ್ನು ತಾತ್ಸಾರ ಭಾವನೆಯಿಂದ ನೋಡುವುದೇ ಜಾಸ್ತಿ. ಇದಕ್ಕೆ ಕಾರಣ ಅಲ್ಲಿರುವ ಭ್ರಷ್ಟಾಚಾರ ಮತ್ತು ರಾಜಕೀಯ ನಾಯಕರ ಅಣತಿಯಂತೆ ನಡೆಯಬೇಕಾದ ಪರಿಸ್ಥಿತಿ (ಅನಿವಾರ್ಯತೆ ?). ನಾನು ಕಂಡಂತೆ ಅಣ್ಣಾ ಮಲೈ ಜನಪ್ರಿಯತೆಗೆ ಕಾರಣ ಅವರು ಇವೆರಡೂ ತಮ್ಮ ಬಳಿ ಸುಳಿಯದಂತೆ ಎಚ್ಚರವಹಿಸಿರುವುದು. ಜೊತೆಗೆ ಅವರು ಕಾನೂನನ್ನು ಜನರ ಮೇಲೆ ಹೇರುವುದರ ಬದಲು ಕಾನೂನು ಪಾಲನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಅದರಲ್ಲೂ ಮುಖ್ಯವಾಗಿ ಮಾದಕ ವಸ್ತುಗಳ ಬಳಕೆ ಮತ್ತು ಅಜಾಗರೂಕತೆಯ ವಾಹನ ಸವಾರಿ ಯಾವ ರೀತಿ ನಮ್ಮನ್ನು ಬಲಿತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಿರುವುದು ಅವರ ಬಹಳ ದೊಡ್ಡ ಸಾಧನೆ. ಇದರೊಂದಿಗೆ ಅವರ ಆರೋಗ್ಯ ಮತ್ತು ಪರಿಸರ ಕಾಳಜಿ ಕೂಡ ಪ್ರಶಂಸನೀಯ. ಕಾಲೇಜು ವಿದ್ಯಾರ್ಥಿಗಳನ್ನು ಸೈಕಲ್ ಬಳಸುವಂತೆ ಹೇಳಿದರಲ್ಲದೆ ತಾವೇ ಸ್ವತಹ ಬಳಸಿ ಮಾದರಿಯಾದರು. ಇನ್ನು ಅಪಘಾತ ಅಥವಾ ಅವಘಡಗಳ ಸಂದರ್ಭದಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮಾನವೀಯತೆಯ ಚೌಕಟ್ಟಿನಲ್ಲಿ ಅವರು ನಿರ್ವಹಿಸಿದ ರೀತಿ ಮುಂದಿನ ಅಧಿಕಾರಿಗಳಿಗೆ ಅನುಸರಣೀಯ. ಒಟ್ಟಿನಲ್ಲಿ ಹೇಳುವುದಾದರೆ ಅಣ್ಣಾ ಮಲೈಯವರು ತಮ್ಮ ಅಧಿಕಾರದ ಅವಧಿಯಲ್ಲಿ ಉಡುಪಿ ನಿವಾಸಿಗಳಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Monday, July 11, 2016

ಸತ್ಯದ ಸಮಾಧಿಯಾಗದಿರಲಿ



ನಾಡೆಂಬ ದೇಹಕ್ಕೆ ರೂಢಿಪತಿಯೇ ಪ್ರಾಣ,
ನಾಡಳಿಯೆ ರೂಢಿಪತಿ ಕೆಡುಗು,  
ಅರಸಳಿಯೆ ನಾಡೆಲ್ಲ ಕೆಡುಗು ಸರ್ವಜ್ಞ
ಯಾಕೋ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಅನಪೇಕ್ಷಿತ ವಿಷಯಗಳಿಂದಾಗಿ ಸುದ್ದಿಯಾಗುತ್ತಿರುವಾಗ ಈ ವಚನ ನೆನಪಾಯಿತು. ರಾಜಾಡಳಿತವಾಗಲಿ ಅಥವಾ ಪ್ರಜಾಪ್ರಭುತ್ವವಾಗಲಿ, ಸರ್ವಜ್ಞನ ಈ ಮಾತು ಎರಡಕ್ಕೂ ಸರಿ ಎನಿಸುತ್ತದೆ. ಪ್ರಜೆಗಳ ಯೋಗಕ್ಷೇಮವೇ ರಾಜನ ಮೊದಲ ಆಧ್ಯತೆ. ಪ್ರಜಾ ಪರಿಪಾಲನೆಗಾಗಿ ರಾಜನು ಮಾಡಿಕೊಂಡ ವ್ಯವಸ್ಥೆಯೇ ಅಧಿಕಾರಿ ವರ್ಗ. ಆದರೆ ಹೊಲದ ರಕ್ಷಣೆಗಾಗಿ ಹಾಕಿದ ಬೇಲಿಯೇ ರಕ್ಷಣೆಗೆ ಮೊರೆಯಿಡುವಂತಾದರೆ? ಇದು ನಮ್ಮ ಇಂದಿನ ಸ್ಥಿತಿ. ಯಾರೋ ಒಬ್ಬ ಅಧಿಕಾರಿ ಈ ಪರಿಸ್ಥಿತಿಗೆ ಬಂದಿದ್ದರೆ ಆತನ ತಪ್ಪಿರಬಹುದೇನೋ ಎಂದು ಭಾವಿಸಿ ಸುಮ್ಮನಿರಬಹುದು. ಆದರೆ ತಿಂಗಳ ಅಂತರದಲ್ಲಿ ಕೆಲವು ಅಧಿಕಾರಿಗಳಲ್ಲಿ ತಾವು ತಮ್ಮ ಹುದ್ದೆಗೆ ನ್ಯಾಯ ಒದಗಿಸುತ್ತಿಲ್ಲ ಅಥವಾ ತಮಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರೆ? ಯೋಚಿಸಬೇಕು. ರಾಜಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳುವುದು ಮತ್ತು ಅದಕ್ಕೆ ತೊಂದರೆಯಾದರೆ ಪ್ರತಿಭಟಿಸುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಾದ ನಮ್ಮ ಕರ್ತವ್ಯ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ನಮ್ಮ ರಾಜ್ಯ ಸರಕಾರ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ. ಪ್ರತಿ ಅಧಿಕಾರಿ ಸಿಡಿದಾಗಲೂ ಆತನ/ಆಕೆಯ ಚಾರಿತ್ಯಹರಣ, ಆತನ/ಆಕೆಯ ಮೇಲೆ ಸುಳ್ಳು ಆಪಾಧನೆ, ಆತನ/ಆಕೆಯ ಕೌಟುಂಬಿಕ ಹಿನ್ನಲೆ ಇತ್ಯಾದಿಗಳ ಮೂಲಕ ಜನರನ್ನು ಹಾಗೆಯೇ ಘಟನಾ ಸಂಬಂಧಿ ತನಿಖೆಯನ್ನು ಹಾದಿ ತಪ್ಪಿಸುವ ಕೆಲಸ ನಮ್ಮ ಮಾನ್ಯ ಮುಖ್ಯಮಂತ್ರಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಹಾಗೂ ತಮ್ಮ ಸಂಗಡಿಗರ ರಕ್ಷಣೆಗಾಗಿ ಮಾನ್ಯರು ಮಾಡುತ್ತಿರುವ ಈ ಎಲ್ಲಾ ಕಸರತ್ತುಗಳನ್ನು ಅರಿಯದಷ್ಟು ದಡ್ಡರಲ್ಲ ಕರ್ನಾಟಕದ ಜನತೆ. ಶ್ರೀ ಡಿ. ಕೆ. ರವಿಯವರಿಂದ ಹಿಡಿದು ಶ್ರೀ ಗಣಪತಿಯವರ ಪ್ರಕರಣದವರೆಗೂ ಸರಕಾರದ ಪ್ರತಿಕ್ರಿಯೆ ಒಂದೇ ರೀತಿಯಾಗಿದೆ. ತನ್ನ ಅಧಿಕಾರಿಗಳ ಹಿತ ಕಾಪಾಡದ ಸರಕಾರದಿಂದ ಜನಹಿತದ ನಿರೀಕ್ಷೆ ಮಾಡುವುದು ಎಷ್ಟು ಸಾಧ್ಯ? ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಜನ ಧಂಗೆ ಏಳುವುದನ್ನು ತಳ್ಳಿಹಾಕುವ ಹಾಗಿಲ್ಲ. ಆದುದರಿಂದ ಇಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಬೇಕಿದೆ. ಇಂತಹ ಕ್ರಮಗಳು ಮಾತ್ರ ನೊಂದ ಕುಟುಂಬಗಳ ನೋವನ್ನು ಕಡಿಮೆಗೊಳಿಸಬಹುದು ಮತ್ತು ಕಳೆದು ಹೋದ ಜನರ ವಿಶ್ವಾಸವನ್ನು ಮರಳಿ ಗಳಿಸಿಕೊಡಬಹುದು. ಸತ್ತವರೊಂದಿಗೆ ಸತ್ಯದ ಸಮಾಧಿಯಾಗದಿರಲಿ ಎಂಬುದೇ ನನ್ನ ಕಳಕಳಿ.
(ದಿನಾಂಕ ೧೪.೦೭.೨೦೧೬ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)