Sunday, March 25, 2012

ಕಥೆ - ’ಆಕೆ’ ಯ ಜೊತೆ (ಅನೈತಿಕ) ಸಂಪರ್ಕ...

ಆ ರಾತ್ರಿ ನಡೆದ ಘಟನೆಯನ್ನು ನೆನಪಿಸುತ್ತಾ... ಆಗ ನಾನು ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯೊಂದರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೆ. ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದ ನಾನು ಸಂಜೆಯ ನಂತರವೂ ಪ್ರಯೋಗಾಲಯದಲ್ಲಿರುವುದು ಸಾಮಾನ್ಯವಾಗಿತ್ತು. ಆಗ ಪಿಎಚ್‍ಡಿ ಪ್ರಬಂಧ ಸಿದ್ಧಪಡಿಸುವ ಹಂತದಲ್ಲಿದ್ದುದರಿಂದ ದಿನವೂ ರೂಮಿಗೆ ಬರುವಾಗ ಮಧ್ಯರಾತ್ರಿ ಕಳೆಯುತ್ತಿತ್ತು. ’ಆ’ ರಾತ್ರಿ ಎಂದಿನಂತೆ ಸುಮಾರು 12 ಘಂಟಗೆ ಪ್ರಯೋಗಾಲಯದ ಲೈಟ್ ಆರಿಸಿ, ಬೀಗ ಹಾಕಿ, ಕೀಯನ್ನು ಕಾವಲುಗಾರನಿಗೆ ನೀಡಿ ರೂಮಿನತ್ತ ಹೆಜ್ಜೆ ಹಾಕಿದೆ. ಅದು ಸುಮಾರು 10 ನಿಮಿಷಗಳ ಹಾದಿ. ಹಾಸ್ಟೇಲ್‍ಗಳ ಎದುರಿನಿಂದ ಹಾದುಹೋಗುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದುದರಿಂದ ಹೆಚ್ಚಿನ ಕೋಣೆಗಳಲ್ಲಿ ಲೈಟ್ ಉರಿಯುತ್ತಿತ್ತು. ಆದುದರಿಂದ ಮಧ್ಯರಾತ್ರಿಯಾದರೂ ನೀರವತೆ ಮಾಯವಾಗಿತ್ತು. ಕಾಲೇಜು ಆವರಣ ದಾಟಿ, ಮುಖ್ಯ ರಸ್ತೆಗೆ ಬಂದೆ. ರಸ್ತೆಯೆಲ್ಲಾ ನಿರ್ಜನವಾಗಿತ್ತು. ಕೆಲವು ನಾಯಿಗಳು ನಗರಪಾಲಿಕೆಯ ತೊಟ್ಟಿಯಲ್ಲಿರುವ ಆಹಾರಕ್ಕಾಗಿ ಕಿತ್ತಾಡುತ್ತಿದ್ದವು. ಅವುಗಳನ್ನು ಸಾಕಷ್ಟು ಅಂತರವಿಟ್ಟುಕೊಂಡು ದಾಟಿದೆ. ಸ್ವಲ್ಪ ದೂರ ಕ್ರಮಿಸಲು ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಂತೆ ಭಾಸವಾಯಿತು. ಹಿಂತಿರುಗಿ ನೋಡಿದೆ; ಅಸ್ಪಷ್ಟವಾಗಿತ್ತು. ಸೂಕ್ಷ್ಮವಾಗಿ ಗಮನಿಸಿದೆ, ಹೌದು ಇದು ’ಆಕೆಯೇ’. ಮೈಯಲ್ಲಿ ಸಣ್ಣ ನಡುಕ ಉಂಟಾಯಿತು. ಆದರೂ ತೋರ್ಪಡಿಸದೆ ನೇರವಾಗಿ ರೂಮಿನತ್ತ ಹೆಜ್ಜೆ ಹಾಕಿದೆ. ಆಕೆ ನನ್ನನ್ನು ಮತ್ತಷ್ಟು ಸಮೀಪಿಸಿದಳು. ಆಕೆಯ ಬರುವಿಕೆಯ ಸದ್ದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಡಿಗೆಯ ವೇಗವನ್ನು ಹೆಚ್ಚಿಸಿದೆ. ರೂಮಿನ ಸಮೀಪ ತಲುಪಿದಾಗ ಮೈಯೆಲ್ಲಾ ಬೆವರಿತ್ತು. ಬೀಗ ತೆಗೆದವನೇ, ಒಳಗೆ ಬಂದು ತಕ್ಷಣ ಬಾಗಿಲು ಭದ್ರಪಡಿಸಿ ನಿಟ್ಟುಸಿರು ಬಿಟ್ಟೆ. ಅಬ್ಬ... ಆಕೆ ಹೊರಗೇ ಉಳಿದಳು. ಬಟ್ಟೆ ಬದಲಾಯಿಸಿ, ಮುಖ ತೊಳೆದೆ. ಊಟದ ತಟ್ಟೆ ಮತ್ತು ಕೆಲವು ಪಾತ್ರೆಗಳು ಸಿಂಕಿನಲ್ಲಿ ಬಿದ್ದಿದ್ದವು. ಅವುಗಳೆಲ್ಲವನ್ನೂ ತೊಳೆದು ನಿದ್ರಿಸಲೆಂದು ಹಾಸಿಗೆಯಲ್ಲಿ ಮೈ ಚಾಚಿದಾಗ ಘಂಟೆ 12.30 ಕಳೆದಿತ್ತು. ನಿದ್ರೆಗೆ ಜಾರುವಷ್ಟರಲ್ಲಿ ಓನರ್ ಮನೆಯ ನಾಯಿ ಬೊಗಳುವುದು ಕೇಳಿತು ಮತ್ತು ಹೆದರಿಕೆಯೂ ಆಯಿತು. ಕೆಲವು ನಿಮಿಷಗಳ ನಂತರವೂ ಬೊಗಳುವಿಕೆ ನಿಲ್ಲದಿದ್ದಾಗ ಮೆಲ್ಲನೆ ಬಾಗಿಲು ತೆರೆದು, ನಾಯಿಯತ್ತ ಟಾರ್ಚ್‍ ಹಾಯಿಸಿದೆ. ಇರುವೆಗಳು ಅದರ ಅನ್ನದ ತಟ್ಟೆಯನ್ನು ಆಕ್ರಮಿಸಿದ್ದವು. ಆ ಕಡೆ ತೆರಳಿ ನಾಯಿಯನ್ನು ಸಂಕೊಲೆಯಿಂದ ಬಿಡಿಸಿದೆ. ನಂತರ ಕೈ ತೊಳೆದು ಒಳ ಬಂದು ಪುನಃ ಹಾಸಿಗೆಯಲ್ಲಿ ಮೈ ಚಾಚಿದೆ. ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ಪಾದವನ್ನು ಯಾರೋ ಸ್ಪರ್ಶಿಸಿದಂತಾಯಿತು. ಆಕೆಯೇ? ನೋಡಿದೆ; ಹೌದು ಆಕೆಯೇ. ಬೆಚ್ಚಿಬಿದ್ದೆ. ಬಹುಶ ನಾನು ನಾಯಿಯನ್ನು ಬಿಡಿಸಲು ತೆರಳಿದಾಗ ಆಕೆ ರೂಮಿನೊಳಕ್ಕೆ ನುಗ್ಗಿ ಅವಿತುಕೊಂಡಿರಬೇಕು. ಆಕೆ ಹಾಗೆಯೇ ಮೇಲೇರಿ ಬರುತ್ತಿದ್ದಳು. ಪ್ರತಿಭಟಿಸಿದೆ... ಊಹುಂ... ಆಕೆ ಲೆಕ್ಕಿಸಲೇ ಇಲ್ಲ. ಮೇಲೇರಿ ನನ್ನ ಮುಖದ ಸಮೀಪ ಬಂದಳು. ಕೆನ್ನೆ... ತುಟಿ... ಪುನಃ ಕೆಳಗೆ ಸರಿದಳು. ಹೆದರಿಕೆಯಿಂದ ಬೆವರಿದೆ. ಆದರೇನು ಮಾಡಲಿ? ನಿಸ್ಸಹಾಯಕನಾಗಿದ್ದೆ. ದೇವರನ್ನು ಪ್ರಾರ್ಥಿಸುವುದೊಂದೇ ನನಗೆ ಉಳಿದಿರುವ ದಾರಿಯಾಗಿತ್ತು. ಆದರೆ ದೇವರಿಗೂ ನನ್ನಲ್ಲಿ ಮುನಿಸಿದ್ದಿರಬೇಕು. ಕೆಲವೇ ನಿಮಿಷಗಳಲ್ಲಿ ಏನು ನಡೆಯಬಾರದೆಂದು ಅನಿಸಿದ್ದೆನೋ ಅದು ನಡೆದೇ ಹೋಯಿತು. ಸಣ್ಣಗೆ ಚೀರಿದೆ. ಆಕೆಗೆ ಇದು ನಿತ್ಯ ಕಾಯಕವಾದುದರಿಂದಲೋ ಏನೋ ಆಯಾಸಗೊಳ್ಳಲೇ ಇಲ್ಲ. ತನ್ನ ಕೆಲಸ ಮುಗಿಸಿದವಳೇ ತೆರಳಿದಳು. ನಾನು ಮಾತ್ರ ಆ  ಅನಿರೀಕ್ಷಿತ ಘಟನೆಯಿಂದ ಗಾಬರಿಯಾಗಿದ್ದೆ. ಕೆಲವು ದಿನಗಳ ಹಿಂದೆಯಷ್ಟೇ ಸ್ನೇಹಿತನೋರ್ವ ಆಕೆಯ ಬಗ್ಗೆ ಎಚ್ಚರಿಸಿ, ಆಕೆಯಿಂದ ದೂರವಿರುವಂತೆ ಸೂಚಿಸಿದ್ದ. ಆದರೇನು ಮಾಡಲಿ? ಎಲ್ಲವೂ ನಡೆದುಹೋಗಿತ್ತು. ಮರುದಿನ ಆ ಸ್ನೇಹಿತನಲ್ಲಿ ರಾತ್ರಿ ನಡೆದ ಘಟನೆಯನ್ನು ವಿವರಿಸಿದೆ. ಆತ ನನ್ನನ್ನು ಸಮಾಧಾನಪಡಿಸಿ ಧೈರ್ಯ ತುಂಬಿದ. ಆದರೆ ನನಗೆ ಅದೊಂದೇ ಚಿಂತೆ. ’ಆ ರೋಗ’ ಬಂದರೆ? ನೆನೆದಾಗಲೇ ನಿಂತ ನೆಲ ಕುಸಿದಂತಾಯಿತು. ಮಾನಸಿಕವಾಗಿ ಕುಗ್ಗಿ ಹೋದೆ. ಒಂದು ವಾರದ ನಂತರವೂ ನನ್ನಲ್ಲಿ ಚಿಂತೆ ಇರುವುದನ್ನು ಗಮನಿಸಿದ ಸ್ನೇಹಿತ ನನಗೊಂದು ಸಲಹೆ ನೀಡಿದ. ಡಿಸ್ಪೆನ್ಸರಿಗೆ ಹೋಗಿ ಡಾಕ್ಟರ್‌ಗೆ ಆ ರಾತ್ರಿ ನಡೆದ ಘಟನೆಯನ್ನು ಹೇಳಿ ’ಆ ರೋಗ’ದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ. ನನಗೂ ಸರಿಯೆನಿಸಿತು. ಡಿಸ್ಪೆನ್ಸರಿಗೆ ತೆರಳಿ ಡಾಕ್ಟರ್‌ಗೆ ಎಲ್ಲವನ್ನೂ ತಿಳಿಸಿದೆ. ಅವರು ’ಆ ಪರೀಕ್ಷೆ’ ನಡೆಸಲು ಲ್ಯಾಬ್ ಅಸಿಸ್ಟೆಂಟ್‍ನಲ್ಲಿ ಹೇಳಿದರು. ನನ್ನ ರಕ್ತದ ಸ್ಯಾಂಪಲ್ ತೆಗೆದುಕೊಂಡ ಅವರು ಸಂಜೆ ಬಂದು ರಿಪೋರ್ಟ್ ತೆಗೆದುಕೊಳ್ಳುವಂತೆ ಹೇಳಿದರು. ದಿನವಿಡೀ ಚಡಪಡಿಸುತ್ತಾ ಕಳೆದೆ. ಸಂಜೆಯಾಗುತ್ತಲೇ ಡಿಸ್ಪೆನ್ಸರಿಗೆ ಹೋಗಿ   ರಿಪೋರ್ಟ್ ಕೇಳಿದೆ. ಅದಾಗಲೇ ಸಿದ್ಧಪಡಿಸಿದ್ದ ರಿಪೋರ್ಟನ್ನು ಕವರಿನಲ್ಲಿ ಹಾಕುತ್ತಾ ನಿಮಗೆ ’ಆ ರೋಗ’ ಬಂದಿಲ್ಲ ಎಂದು ಹೇಳಿದರು. ನಿಟ್ಟುಸಿರು ಬಿಟ್ಟೆ. ಕವರ್ ತೆಗೆದು ನೋಡುತ್ತಲೇ ಸಮಾಧಾನವಾಗಿತ್ತು. ಮಲೇರಿಯಾ ಬಂದಿರಲಿಲ್ಲ. ಮನಸ್ಸಿನಲ್ಲೇ ಆ ಹೆಣ್ಣು ಸೊಳ್ಳೆ(ಸೂಳೆ)ಗೆ ಥ್ಯಾಂಕ್ಸ್ ಹೇಳಿದೆ.
(ಇದು ನಾನು ಪಿಎಚ್‍ಡಿ ಅಧ್ಯಯನ ಮಾಡುತ್ತಿದ್ದಾಗ ಬರೆದ ಕಥೆ. ನಿಮಗಾಗಿ ಇಲ್ಲಿ ಇದನ್ನು ಪ್ರಕಟಿಸಿದ್ದೇನೆ)