Friday, February 24, 2012

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

 

ಮಾನ್ಯ ಯಡಿಯೂರಪ್ಪನವರೇ,

ಹೊಲಸು ರಾಜಕೀಯದ ಬಗ್ಗೆ ಮಾತನಾಡಬಾರದು ಮತ್ತು ಬರೆಯಬಾರದು ಎಂದು ಎಷ್ಟೋ ಬಾರಿ ತೀರ್ಮಾನಿಸಿದ್ದರೂ ತಮ್ಮ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ತಮ್ಮ ವರ್ತನೆಗಳನ್ನು ನೋಡಿದಾಗ ಕೆಲವೊಂದು ಅಂಶಗಳನ್ನು ತಮ್ಮ ಗಮನಕ್ಕೆ ತರಬೇಕೆಂದೆನಿಸಿತು. ಅದಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದರಲ್ಲಿನ ಯಾವುದೇ ಸಾಲುಗಳು ತಮಗೆ ಬೇಸರ ತರಿಸಿದರೆ ಅದಕ್ಕೊಂದು ಕ್ಷಮೆ ಇರಲಿ.

ನಾನು ಶಾಲಾ ಮೆಟ್ಟಿಲು ಹತ್ತುವ ಮೊದಲೇ ಆರ್ ಎಸ್ ಎಸ್ಶಾಖೆಗೆ ಹೋಗುತ್ತಿದ್ದೆ. ಸಂಘ ನನಗೆ ಶಿಸ್ತು, ಸಮಯಪಾಲನೆ, ಸರಳತೆ, ದೇಶಭಕ್ತಿ ಮುಂತಾದ ಹಲವು ಗುಣಗಳನ್ನು ಜೀವನದಲ್ಲಿ ಅಳವಡಿಸುವಂತೆ ಪ್ರೇರೇಪಿಸಿದೆ. ಅಂತಹ ಸಂಘ ಪರಿವಾರದ ಹಿನ್ನಲೆಯಿಂದ ಬಂದ ತಮ್ಮ ಬಗ್ಗೆ ನನಗೆ ಮೊದಲಿನಿಂದಲೂ ಗೌರವ. ಅಲ್ಲದೆ ತಾವು ಹಿಂದೆ ನಡೆಸಿದ ರೈತ ಪರ ಹೋರಾಟಗಳು ಮತ್ತು ಪಕ್ಷವನ್ನು ಮುನ್ನಡೆಸುತ್ತಿದ್ದ ರೀತಿ ತಮ್ಮ ಬಗ್ಗೆ ನನ್ನಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿತು.ಆದುದರಿಂದಲೇ ತಾವು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದಾಗ ಬಹಳ ಸಂಭ್ರಮಪಟ್ಟಿದ್ದೆ ಮತ್ತು ಉತ್ತಮ ಆಡಳಿತವನ್ನೂ ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆಯ ಗೋಪುರ ಮರಳಿನ ಸೌಧದಂತೆ ಕುಸಿದು ಬಿದ್ದಿದೆ. ಅಧಿಕಾರ ಎಂಬುದು ಒಬ್ಬ ವ್ಯಕ್ತಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು (ಕೆಡಿಸಬಹುದು?) ಎಂಬುದಕ್ಕೆ ತಾವು ನಿದರ್ಶನವಾದುದು ಒಂದು ದುರಂತ. ಮುಖ್ಯಮಂತ್ರಿ ಪದವಿಗೆ ಹಲವು ಆಕಾಂಕ್ಷಿಗಳಿದ್ದರೂ ನಿಮ್ಮ ಹಿರಿತನ ಮತ್ತು ಸಾಮರ್ಥ್ಯವನ್ನು ಮನಗಂಡು ಪಕ್ಷ ಆ ಜವಾಬ್ದಾರಿಯನ್ನು ತಮಗೆ ನೀಡಿತು. ಆದರೆ ಹೊಣೆಗಾರಿಕೆಯನ್ನರಿತು ಅಡಳಿತ ನಡೆಸುವ ಬದಲಾಗಿ ತಾವು ಅಧಿಕಾರವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿರಿ. ತದನಂತರದ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳು ತಮಗೆ ತಿಳಿದೇ ಇದೆ. ಈಗ ಪುನಃ ಅಧಿಕಾರಕ್ಕಾಗಿ ಹೋರಾಟವನ್ನು ಆರಂಭಿಸಿದ್ದೀರಿ. ಈ ಸಂದರ್ಭದಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಿಮ್ಮ ಮುಂದಿಡುವುದಕ್ಕೆ ಇಷ್ಟಪಡುತ್ತೇನೆ.

  •  ಅಧಿಕಾರ ಉಳಿಸುವ ಧಾವಂತದಲ್ಲಿ ಸಂಘ ಪರಿವಾರದ ಸಿದ್ಧಾಂತವನ್ನು ಮೀರಿ ’ಆಪರೇಷನ್ ಕಮಲ’ ದ ಮೂಲಕ ಬೇರೆ ಪಕ್ಷಗಳ ಶಾಸಕರನ್ನು ವಿವಿಧ ಆಮಿಷಗಳನ್ನು ತೋರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರಿ. ನಂತರ ಮಂತ್ರಿ ಪದವಿಗೆ ಅರ್ಹರಾದ ಅನೇಕ ಮಂದಿ ಪಕ್ಷದಲ್ಲಿದ್ದರೂ ವಲಸಿಗರಿಗೆ ಮಂತ್ರಿ ಪದವಿ ನೀಡಿ, ಪಕ್ಷಕ್ಕಾಗಿ ತ್ಯಾಗ ಮಾಡಿ ಎಂದು ಹಿರಿಯ ನಾಯಕರ ಬಾಯಿ ಮುಚ್ಚಿಸಿದ ನೀವು ಈಗ ಮಾಡುತ್ತಿರುವುದಾದರೂ ಏನು?
  •  ಅಷ್ಟಕ್ಕೂ ನೀವು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದುದು ಯಾರಿಂದ? ತಮ್ಮ ಕುಟುಂಬದ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ತಾವೇ ಸ್ವತಃ ಖೆಡ್ಡಾ ನಿರ್ಮಾಣ ಮಾಡಿಕೊಂಡಿರಿ ಎಂಬುದು ತಮಗೆ ಮರೆತು ಹೋಯಿತೆ?
  •  ಅಂದು ಆರೋಪದ ಕಾರಣ ರಾಜೀನಾಮೆ ನೀಡಿದ ನೀವು ಇಂದು ಆರೋಪ ಮುಕ್ತರಾಗಿದ್ದೀರ? ಹಾಗಿರುವಾಗ ಯಾವ ಆಧಾರದಲ್ಲಿ ನೀವು ಮರಳಿ ಅಧಿಕಾರ ನೀಡಲು ಆಗ್ರಹಿಸುತ್ತೀರಿ?
  •  ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನೀವು ಇಂದು ಅವರ ರಾಜೀನಾಮೆ ಕೇಳುವಂತಹ ತಪ್ಪೇನಾಗಿದೆ?
  •  ತಾವು, ನಾನು ಪ್ರಬಲ ಸಮುದಾಯವೊಂದರ ನಾಯಕ ಮತ್ತು ಆ ಸಮುದಾಯ ದೂರ ಸರಿದರೆ ಪಕ್ಷಕ್ಕೆ ಸೋಲು ಖಚಿತ ಎಂದು ಹೇಳುತ್ತಿರುವುದನ್ನು ಕೇಳಿದ ಮೇಲೂ ನಿಮ್ಮನ್ನು ಜನನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಅಷ್ಟಕ್ಕೂ ರಾಜ್ಯ ಮತ್ತು ಪಕ್ಷ ಕೇವಲ ಸಮುದಾಯವೊಂದರ ಆಸ್ತಿಯೇ?
  •  ತಾವು ಪಕ್ಷ ಸಂಘಟನೆಗಾಗಿ ದುಡಿದವರಲ್ಲಿ ಪ್ರಮುಖರು ಎಂಬ ಮಾತ್ರಕ್ಕೆ ಪಕ್ಷ ತನ್ನೊಬ್ಬನ ಆಸ್ತಿ ಎಂಬಂತೆ ವರ್ತಿಸುವುದು ಎಷ್ಟು ಸರಿ?

ದಶಕಗಳ ಜನಪರ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡ ನೀವು ಇಷ್ಟು ಬಾಲಿಶವಾಗಿ ವರ್ತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜ್ಯ ಮತ್ತು ತಾವೇ ಬೆಳೆಸಿದ ಪಕ್ಷವನ್ನು ಬಲಿ ಕೊಡಬೇಡಿ ಎಂಬುದೊಂದೇ ನನ್ನ ಕೋರಿಕೆ.

ಇಂತಿ,

ಮಹೇಶ ಯಂ.ಜಿ.

ಕೆದಿಲ

 

Wednesday, February 22, 2012

ಗುಣಮಟ್ಟದ ಉನ್ನತ ಶಿಕ್ಷಣ ಕೇವಲ ಮರೀಚಿಕೆಯೇ?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶವೊಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಅವಶ್ಯಕವಾಗಿದೆ. ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕಾದರೆ ಗುಣಮಟ್ಟದ ಉನ್ನತ ಶಿಕ್ಷಣ ಅತ್ಯಗತ್ಯ. ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ನಲುಗುತ್ತಿರುವಾಗ ಜ್ಞಾನಾಧರಿತ ಅರ್ಥವ್ಯವಸ್ಥೆಯನ್ನು ಭದ್ರಗೊಳಿಸುತ್ತ ಚಿಂತನೆ ನಡೆಸಲು ಇದು ಸಕಾಲ.

ಸ್ವಾತಂತ್ರ್ಯೋತ್ತರ ಭಾರತದ ಶಿಕ್ಷಣ ವ್ಯವಸ್ಥೆಯನ್ನೊಮ್ಮೆ ಅವಲೋಕಿಸಿದರೆ ನಮಗೆ ಎಲ್ಲೋ ಜಾರಿ ಹೋದಂತೆ ಭಾಸವಾಗುತ್ತದೆ. ನಾವಿಂದು ಶಿಕ್ಷಣವನ್ನು ಕೇವಲ ಉದ್ಯೋಗ ಪಡೆಯುವ ರಹದಾರಿಯಂತೆ ಕಾಣುತ್ತಿದ್ದೇವೆ. ಅದಕ್ಕಿಂತ ಭಿನ್ನವಾದ ಚಿಂತನೆ ನಮಗಿನ್ನೂ ಬರದಿರುವುದು ಒಂದು ದುರಂತವೇ ಸರಿ. ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೂ ಶಿಕ್ಷಣ ಪದ್ಧತಿಯ ಬಗ್ಗೆ ಒಂದು ಸ್ಪಷ್ಟವಾದ ನಿಲುವು ಇದ್ದಂತೆ ಗೋಚರಿಸುತ್ತಿಲ್ಲ. ಇವುಗಳ ನಡುವೆ ಇಂದು ಶಿಕ್ಷಣವೂ ಒಂದು ವ್ಯಾಪಾರದ ಸರಕಾಗಿರುವುದು ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಿದೆ. ಈ ಎಲ್ಲಾ ಅಂಶಗಳು ಪೂರಕವಾಗಿ ಸೇರಿ ಶಿಕ್ಷಣದ ಗುಣಮಟ್ಟದ ಬಗೆಗೆ ಎತ್ತುವ ಧ್ವನಿಯನ್ನು ಕ್ಷೀಣಿಸುವಂತೆ ಮಾಡಿವೆ.
ನಮ್ಮಲ್ಲಿ ಪ್ರತೀ ವರ್ಷ ಹಲವು ಕಾಲೇಜುಗಳು/ವಿಶ್ವ ವಿದ್ಯಾನಿಲಯಗಳು ಪ್ರಾರಂಭಗೊಳ್ಳುತ್ತಿವೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಮಿತಿಗಳು ಮತ್ತು ಸರಕಾರ ಇವುಗಳಿಗೆ ಅನುಮತಿ ನೀಡುವ ವೇಳೆ ಗುಣಮಟ್ಟದ ಬಗೆಗೆ ಖಾತ್ರಿಪಡಿಸಿಕೊಳ್ಳದೇ ಇರುವುದು ದುರದೃಷ್ಟಕರ ಸಂಗತಿ. ಜೊತೆಗೆ ಶೈಕ್ಷಣಿಕ ಸ್ವಾಯತ್ತತೆ ನೀಡುವ ಪದ್ಧತಿ ಗುಣಮಟ್ಟದ ಕುಸಿತಕ್ಕೆ ನೀಡಿದ ಕೊಡುಗೆ (?) ಗಣನೀಯ.  ಶೈಕ್ಷಣಿಕ ಸ್ವಾಯತ್ತತೆ ನೀಡುವುದರ ಹಿಂದಿನ ಉದ್ದೇಶ ಗುಣಾತ್ಮಕವಾಗಿದ್ದರೂ ಅದು ನಿರೀಕ್ಷಿತ ಗುರಿಯನ್ನು ತಲುಪುವುದರಲ್ಲಿ ವಿಫಲವಾಗಿದೆ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ಇವೆಲ್ಲದರ ಜೊತೆಗೆ ವಿಶ್ವ ವಿದ್ಯಾನಿಲಯಗಳಲ್ಲಿನ ರಾಜಕೀಯ, ಗುಂಪುಗಾರಿಕೆ ಮತ್ತು ಸ್ವಾರ್ಥ ಮನೋಭಾವನೆಗಳು ಶಿಕ್ಷಣ ವ್ಯವಸ್ಥೆಯ ಅಡಿಪಾಯಕ್ಕೇ ಅಪಾಯ ತಂದೊಡ್ಡುವ ಮಟ್ಟಕ್ಕೆ ಬೆಳೆದು ನಿಂತಿವೆ. ಇಂದು ಹೆಚ್ಚಿನ ವಿಶ್ವ ವಿದ್ಯಾನಿಲಯಗಳ ಉಪನ್ಯಾಸಕರು ಪಠ್ಯೇತರ ಚಟುವಟಿಕೆಗಳಲ್ಲಿ (?) ತಮ್ಮನ್ನು ತೊಡಗಿಸಿಕೊಂಡಿದ್ದು, ಬೋಧನೆ ಮತ್ತು ಸಂಶೋಧನೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ. ಇದರಿಂದಾಗಿ ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆ ನಿರೀಕ್ಷಿತ ಮಟ್ಟವನ್ನು ತಲುಪಲು ವಿಫಲವಾಗಿದೆ. ಭ್ರಷ್ಟಾಚಾರವೆಂಬ ಅಕ್ಟೋಪಸ್ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರವನ್ನೂ ತಬ್ಬಿಕೊಂಡಿದ್ದು ಇದರ ಜ್ವಲಂತ ಉದಾಹರಣೆಗಳನ್ನು ಇತ್ತೀಚೆಗೆ ಮಾದ್ಯಮಗಳಲ್ಲಿ ನಾವು ನೋಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಉನ್ನತ ಶಿಕ್ಷಣದ ಗುಣಮಟ್ಟದ ಕುಸಿತವನ್ನು ತಡೆಯಬೇಕಾದರೆ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದೆನಿಸುತ್ತದೆ.
  • ಉಪನ್ಯಾಸಕರ ನೇಮಕಾತಿಯಲ್ಲಿ ಪಾರದರ್ಶಕತೆ ಆ ಮೂಲಕ ಹಣ ಮತ್ತು ಅಧಿಕಾರದ ಪ್ರಭಾವದಿಂದ ನೇಮಕಾತಿ ಮಾಡಿಸಿಕೊಳ್ಳುವವರಿಗೆ ಕಡಿವಾಣ ಹಾಕಬಹುದು. ಮುಖ್ಯವಾಗಿ ಈ ಸಮಸ್ಯೆ ಇರುವುದು ಸರಕಾರಿ ಕಾಲೇಜು/ವಿಶ್ವ ವಿದ್ಯಾನಿಲಯಗಳ ನೇಮಕಾತಿಗಳಲ್ಲಿ. 
  • ಶಿಕ್ಷಣ ಸಂಸ್ಥೆಗಳಿಗೆ ಪಠ್ಯಕ್ರಮ ತಯಾರಿಯಲ್ಲಿ ಮಾತ್ರ ಸ್ವಾಯತ್ತತೆ ನೀಡಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಬಾಹ್ಯ ವೀಕ್ಷಕರು/ಮೌಲ್ಯಮಾಪಕರನ್ನು ನೇಮಿಸುವುದನ್ನು ಕಡ್ಡಾಯ ಮಾಡಬೇಕು.  
  • ಏಕರೂಪದ ಪ್ರವೇಶ ಪದ್ಧತಿಯನ್ನು ಜಾರಿಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳ ಅರ್ಹತೆಯ ಮೇಲೆ ಪ್ರವೇಶಾತಿ ಸಾದ್ಯವಾಗುತ್ತದೆ.
  • ಸರಕಾರಿ ಕಾಲೇಜು/ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತು ಪ್ರಯೋಗಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಅನುಕೂಲಗಳನ್ನು ಕಲ್ಪಿಸುವುದು.
  • ಸಮಕಾಲೀನ ಅಗತ್ಯತೆಗೆ ಅನುಗುಣವಾಗುವಂತಹ ಪಠ್ಯಕ್ರಮ ಸಿದ್ಧಪಡಿಸಲು ಕೈಗಾರಿಕೋದ್ಯಮಿಗಳು/ಅರ್ಥಿಕ ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಬೇಕು ಮತ್ತು ಅದು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶವೊಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಅವಶ್ಯಕವಾಗಿದೆ. ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕಾದರೆ ಗುಣಮಟ್ಟದ ಉನ್ನತ ಶಿಕ್ಷಣ ಅತ್ಯಗತ್ಯ. ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ನಲುಗುತ್ತಿರುವಾಗ ಜ್ಞಾನಾಧರಿತ ಅರ್ಥವ್ಯವಸ್ಥೆಯನ್ನು ಭದ್ರಗೊಳಿಸುತ್ತ ಚಿಂತನೆ ನಡೆಸಲು ಮತ್ತು ಉನ್ನತ ಶಿಕ್ಷಣದ ಸುಧಾರಣೆಯತ್ತ ಕಾರ್ಯೋನ್ಮುಖರಾಗಲು ಇದು ಸಕಾಲ. ಇಲ್ಲವಾದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವೆಂಬುದು ಕೇವಲ ಮರೀಚಿಕೆಯಾದೀತು.
(ದಿನಾಂಕ ೨೫.೦೪.೨೦೧೩ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)