Thursday, August 16, 2018

ಭಾರತ ಮಾತೆಯ ಧೀಮಂತ ಪುತ್ರನಿಗೆ ನುಡಿ ನಮನ


ಅಜಾತ ಶತ್ರು, ಕವಿ ಹೃದಯಿ, ರಾಜಕೀಯ ಮುತ್ಸದ್ಧಿ, ರಾಷ್ಟ್ರವಾದಿ, ಚಿಂತಕ.... ಹೀಗೆ ಹೇಳುತ್ತಾ ಹೋದರೆ ಮುಗಿಯದ ಉಪಮೆಗಳು. ಹೌದು... ನಾನು ಬರೆಯುತ್ತಿರುವುದು ಕೋಟ್ಯಂತರ ಭಾರತೀಯರ ಹೃದಯದಲ್ಲಿ ಸ್ಥಾನ ಗಳಿಸಿ ಇಂದು ನಮ್ಮನ್ನು ಅಗಲಿರುವ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ. ಸ್ವಾತಂತ್ರ್ಯೋತ್ತರ ಭಾರತ ಕಳೆದ ಏಳು ದಶಕಗಳಲ್ಲಿ ಹಲವಾರು ನಾಯಕರನ್ನು ಕಂಡಿದೆ. ಕೆಲವು ನಾಯಕರು ತಮ್ಮ ದಿಟ್ಟ ನಿರ್ಧಾರಕ್ಕೆ ಹೆಸರುವಾಸಿಯಾದರೆ ಇನ್ನು ಕೆಲವರು ಜನಪ್ರಿಯತೆ, ಬುದ್ಧಿವಂತಿಕೆ... ಹೀಗೆ ಒಂದೊಂದು ಗುಣ ವಿಶೇಷಗಳಿಂದ ಗುರುತಿಸಿಕೊಂಡಿದ್ದರು. ಆದರೆ ಅಟಲ್ ಜಿ ಅವರು ಇವೆಲ್ಲಾ ಗುಣ ವಿಶೇಷಗಳನ್ನು ಹೊಂದಿರು ಏಕೈಕ ರಾಜಕಾರಣಿಯಾಗಿ ಭಾರತೀಯರ ಪ್ರೀತಿ ಪಾತ್ರರಾಗಿ ಬಾಳಿ ಬದುಕಿದರು. ಸ್ವಂತ ಹಿತಾಸಕ್ತಿಗಿಂತ ಪಕ್ಷ ಮುಖ್ಯ ಮತ್ತು ಪಕ್ಷಕ್ಕಿಂತ ದೇಶ ಮುಖ್ಯ ಎಂದು ಬಲವಾಗಿ ನಂಬಿದ್ದ ಅವರು ಅದರಂತೆ ನಡೆದರು ಕೂಡ. ತನ್ನ ರಾಜಕೀಯ ಜೀವನದ ಬಹುಪಾಲು ವಿರೋಧ ಪಕ್ಷದಲ್ಲಿ ಕಳೆದ ಅವರು ಸರಕಾರ ತಪ್ಪಿ ನಡೆದಾಗ ತಿದ್ದಿ ಒಳ್ಳೆಯ ಕೆಲಸವನ್ನು ಬೆಂಬಲಿಸಿ ಮಾದರಿ ವಿರೋಧಿ ನಾಯಕರು ಎಂದು ಎನಿಸಿಕೊಂಡರು. ಎಂದೂ ಅಧಿಕಾರಕ್ಕೆ ಹಂಬಲಿಸದ ಅವರು ೧೯೯೬ರಲ್ಲಿ ಸಂಸತ್ತಿನಲ್ಲಿ ವಿಶ್ವಾಸ ಮತಯಾಚನೆಯ ಸಂದರ್ಭ ಮಾಡಿದ ಭಾಷಣ ರಾಜಕೀಯ ನಾಯಕರಿಗೆ ನೀತಿ ಪಾಠ ಎಂದರೆ ತಪ್ಪಾಗದು. ಅಧಿಕಾರ ಇರಲಿ ಇಲ್ಲದಿರಲಿ ದೇಶ ಸೇವೆ ಮುಂದುವರಿಯುತ್ತದೆ, ಹಾಗೆಯೇ ಮುಂದೆ ಬರುವ ಸರಕಾರಕ್ಕೆ ರಚನಾತ್ಮಕ ವಿರೋಧ ಪಕ್ಷದ ಮೂಲಕ ಸಲಹೆಗಳನ್ನು ನೀಡುತ್ತಾ ಅಧಿಕಾರ ನಡೆಸಲು ಅನುವು ಮಾಡಿಕೊಡುತ್ತೇವೆ ಎಂದ ಮಾತು ಅವರ ಮುತ್ಸದ್ದಿತನಕ್ಕೆ ಸಾಕ್ಷಿ. ಮುಂದೆ ಅಧಿಕಾರಕ್ಕೆ ಬಂದಾಗಲೂ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಆಡಳಿತ ನಡೆಸಲು ಪ್ರಯತ್ನಿಸಿದರು. ಸ್ನೇಹಿತರನ್ನು ಬದಲಿಸಬಹುದು ಆದರೆ ನೆರೆಯವರನ್ನಲ್ಲ ಎಂಬ ಸತ್ಯವನ್ನು ಅರಿತಿದ್ದ ಅವರು ಪಾಕಿಸ್ತಾನಕ್ಕೆ ಸ್ನೇಹ ಹಸ್ತ ಚಾಚಿದರು. ಆದರೆ ಪಾಕಿಸ್ತಾನದ ವಿಶ್ವಾಸದ್ರೋಹಕ್ಕೆ ಕಾರ್ಗಿಲ್ ನಲ್ಲಿ ಸರಿಯಾದ ಉತ್ತರ ಕೊಟ್ಟು ತಾನು ಹೂವಿಗಿಂತ ಕೋಮಲನಾದರೂ ವಜ್ರಕ್ಕಿಂತ ಕಠಿಣನೂ ಆಗಬಲ್ಲೆ ಎಂದು ತೋರಿಸಿದರು. ಪಕ್ಷಾತೀತವಾಗಿ ಸ್ನೇಹಿತರನ್ನು ಹೊಂದಿದ್ದರೂ ತಾನು ನಂಬಿದ ತತ್ವಾದರ್ಶಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಅಧಿಕಾರ ಉಳಿಸಿಕೊಳ್ಳಲು ಕೇವಲ ಒಂದು ಮತದ ಕೊರತೆ ಉಂಟಾದರೂ ಅನೈತಿಕ ಮಾರ್ಗವನ್ನು ಅನುಸರಿಸದೆ ಪ್ರಜಾಪ್ರಭುತ್ವ ಕೇವಲ ಸಂಖ್ಯೆಯ ಆಟವಲ್ಲ ಎಂದು ಸಾಧಿಸಿದರು. ತಮ್ಮ ಉತ್ತಮ ಆಡಳಿತದಿಂದ ಜನಪ್ರಿಯತೆಯನ್ನು ಗಳಿಸಿದ್ದರೂ ಅವರು ೨೦೦೪ ಚುನಾವಣೆಯಲ್ಲಿ ಸೋತಿರುವುದಕ್ಕೆ ಕಾರಣ ಕಂಡುಕೊಳ್ಳುವಲ್ಲಿ ರಾಜಕೀಯ ಪಂಡಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಆದರ್ಶ ರಾಜಕಾರಣಿಯಾಗಿ ಬಾಳಿ ಬದುಕಿದ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಮೂಲಕ ಭಾರತ ಮಾತೆಯ ಧೀಮಂತ ಪುತ್ರನಿಗೆ ನುಡಿ ನಮನಗಳನ್ನು ಸಲ್ಲಿಸುತ್ತೇನೆ.