Tuesday, June 30, 2015

ಪರ್ಕಳದ ಗೋಳು ಕೇಳೋರು ಯಾರು?

ಉಡುಪಿಯನ್ನು ಕಾರ್ಕಳ ಹಾಗೂ ಆಗುಂಬೆಗೆ ಸೇರಿಸುವ ಹೆದ್ದಾರಿಯಲ್ಲಿ ಬರುವ ಚಿಕ್ಕ ಪಟ್ಟಣ ಈ ಪರ್ಕಳ. ಶಿಕ್ಷಣ ಕಾಶಿ ಮಣಿಪಾಲದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವುದರಿಂದ ಅಲ್ಲಿನ ಹೆಚ್ಚಿನ ಉದ್ಯೋಗಿಗಳು ಪರ್ಕಳದ ಆಸುಪಾಸಿನಲ್ಲಿ ವಾಸವಾಗಿದ್ದಾರೆ. ಅಲ್ಲದೆ ಪರ್ಕಳದಲ್ಲಿ ಹಾದು ಹೋಗುವ ಈ ಹೆದ್ದಾರಿ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗಿದೆ (ನಂ. ೧೬೯ಎ). ತೀರ್ಥಯಾತ್ರಿಗಳು ಉಡುಪಿಯಿಂದ ಧರ್ಮಸ್ಥಳಕ್ಕೆ ಹೋಗಬೇಕಾದರೆ ಈ ದಾರಿಯನ್ನೇ ಬಳಸುತ್ತಾರೆ. ಇಷ್ಟೆಲ್ಲಾ ಮಹತ್ವಗಳಿಂದ ಕೂಡಿರುವ ಈ ಹೆದ್ದಾರಿ ಪರ್ಕಳದ ಸುಮಾರು ೪೦೦ ಮೀ. ಅಂತರದಲ್ಲಿ ಇರುವ ಸ್ಥಿತಿಯಂತೂ ಶೋಚನೀಯ. ಅಗಲ ಕಿರಿದಾದ ಈ ಪ್ರದೇಶದಲ್ಲಿ ದಿನದ ಹೆಚ್ಚಿನ ಸಮಯದಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಚಾಲಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಸಮಯದಲ್ಲಂತೂ ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರುಅಂತರವನ್ನು ದಾಟಲು ಸಾಕಷ್ಟು ಸಮಯವನ್ನೇ ತೆಗೆದುಕೊಳ್ಳುತ್ತಾರೆ (ವ್ಯರ್ಥ ಗೊಳಿಸುತ್ತಾರೆ?). ಚರಂಡಿ ವ್ಯವಸ್ಥೆಯೂ ಸರಿ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆ ಇಮ್ಮಡಿಯಾಗುತ್ತದೆ. ಇಲ್ಲಿ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಕೆಸರು ನೀರಿನ ಸ್ನಾನ ಸಾಮಾನ್ಯದ ವಿಷಯವಾಗಿದೆ. ಎಲ್ಲಾ ಸಮಸ್ಯೆಗಳ ಸರಮಾಲೆಯ ಬಗ್ಗೆ ನಮ್ಮ ಅಧಿಕಾರಿಗಳಿಗಾಗಲಿ ಅಥವಾ ರಾಜಕಾರಣಿಗಳಿಗಾಗಲಿ ಗೊತ್ತಿಲ್ಲದಿಲ್ಲ. ಆದರೆ ಇದನ್ನು ಸರಿಪಡಿಸುವ ಇಚ್ಛಾಶಕ್ತಿಯನ್ನು ಉಡುಪಿ ಶ್ರೀ ಕೃಷ್ಣ ಇನ್ನೂ ಇವರಿಗೆ ದಯಪಾಲಿಸಿಲ್ಲ. ಇಂದು ದೇಶದ ಪ್ರಧಾನಿ ಸ್ಮಾರ್ಟ್ ಸಿಟಿಯ ಕನಸು ಕಾಣುತ್ತಿದ್ದರೆ ಪರ್ಕಳದ ನಿವಾಸಿಗಳು ಕನಿಷ್ಟ ಸೌಲಭ್ಯವಾದರೂ ಲಭಿಸಲಿ ಎಂದು ಹಂಬಲಿಸುತ್ತಿದ್ದಾರೆ. ಪ್ರದೇಶದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಾಜಕೀಯವನ್ನು ಬದಿಗಿಟ್ಟು, ಸಮಸ್ಯೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿ ಎಂದು ಆಶಿಸುತ್ತಾ ಅಂತಹ ಸದ್ಬುದ್ಧಿಯನ್ನು ಅವರಿಗೆ ನೀಡಲಿ ಎಂದು ಉಡುಪಿ ಶ್ರೀ ಕೃಷ್ಣನಲ್ಲಿ ಬೇಡಿಕೊಳ್ಳುತ್ತೇನೆ.

 

Thursday, November 13, 2014

ಮೋದಿ ಮುಂದಿರುವ ಸವಾಲುಗಳು



ತಿಂಗಳುಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಸ್ವತಃ ತಾನೇ ನಿರೀಕ್ಷಿಸದ ರೀತಿಯ ಅದ್ಭುತ ಸಾಧನೆಯೊಂದಿಗೆ ಅಧಿಕಾರದ ಗದ್ದುಗೆಯನ್ನೇರಿತು. ಇದು ಬಿಜೆಪಿಗಿಂತಲೂ ಅದು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನರೇಂದ್ರ ಮೋದಿ ಎಂಬ ವ್ಯಕ್ತಿಯೋರ್ವನ ಗೆಲುವು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳಬೇಕು. ೧೨೦ ಕೋಟಿ ಜನಸಂಖ್ಯೆಯ ಈ ದೇಶ, ವಿವಾದಗಳಿಂದಲೇ ಮಾದ್ಯಮಗಳಲ್ಲಿ ಸುದ್ದಿಯಲ್ಲಿದ್ದ ಮೋದಿಯನ್ನು ಬೆಂಬಲಿಸಿದ್ದು ಯಾವ ಕಾರಣಕ್ಕಾಗಿ ಎಂಬುದು ಬಹಳ ಮುಖ್ಯವಾದ ವಿಷಯ. ೧೦ ವರ್ಷಗಳ ಯುಪಿಎ ದುರಾಡಳಿತದಿಂದ ಬೇಸತ್ತ ಜನತೆ ಬದಲಾವಣೆಗಾಗಿ ಹಾತೊರೆಯುತ್ತಿತ್ತು. ಅದೇ ಸಮಯಕ್ಕೆ ಮೋದಿ ಬಿತ್ತಿದ ಅಭಿವೃದ್ಧಿಯ ಕನಸು ಮರುಭೂಮಿಯಲ್ಲಿನ ಓಯಸಿಸ್ ನಂತೆ ಜನರಲ್ಲಿ ಹೊಸ ಆಶಾ ಭಾನೆಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಯಿತು. ಮೋದಿಯವರನ್ನು ಅವರ ಪಕ್ಷ, ಅಭಿಮಾನಿಗಳು ಮತ್ತು ಕೊನೆಗೆ ಮಾಧ್ಯಮ ಬಿಂಬಿಸಿದ ರೀತಿ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಅವರೊಬ್ಬರೇ ದೇಶವನ್ನು ಮುನ್ನಡೆಸಲು ಸಮರ್ಥ ನಾಯಕರು ಎಂಬ ಭಾವನೆ ಸಾರ್ವತ್ರಿಕವಾಗಲು ಕಾರಣವಾಯಿತು. ಅಲ್ಲದೆ ಶತಮಾನದ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದು ತನ್ನಲ್ಲಿ ಸಮರ್ಥ ನಾಯಕರಿದ್ದರೂ ಕುಟುಂಬವೊಂದಕ್ಕೆ ಅವರೆಲ್ಲರನ್ನೂ ಒತ್ತೆಯಿಟ್ಟಂತೆ ನಡೆದುಕೊಳ್ಳುವ ಮೂಲಕ ಮೋದಿಯವರಿಗೆ ಪರೋಕ್ಷವಾಗಿ ಸಹಾಯ ಮಾಡಿತು! ಹೀಗೆ ಹಲವಾರು ಕಾರಣಗಳು ಪೂರಕವಾಗಿ ಬೆರೆತು ಮೋದಿಯವರನ್ನು ಪ್ರಧಾನಿ ಹುದ್ದೆಗೆ ಏರಿಸಿತು. ಈಗ ಮೋದಿ ಮುಂದಿರುವ ಸವಾಲೆಂದರೆ ತಾವು ಬಿತ್ತಿದ ಕನಸಿನ ಬೀಜವನ್ನು ಹೆಮ್ಮರವಾಗುವಂತೆ ನೋಡಿಕೊಳ್ಳುವುದು.
ಮೂಲಭೂತ ಸೌಕರ್ಯದಲ್ಲಿನ ಬೆಳವಣಿಗೆಗೆ ಹೆಚ್ಚಿನ ವೇಗ ನೀಡುವುದು  ಮೋದಿಯವರ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಬೇಕು. ಇನ್ನು ಮೋದಿ ಜನತೆಗೆ ನೀಡಿದ ಬಹು ದೊಡ್ಡ ಭರವಸೆಯೆಂದರೆ ಕಪ್ಪು ಹಣದ ವಾಪಸಾತಿ. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂಬುದು ಮೋದಿ ಸರಕಾರಕ್ಕೆ ಈಗಾಗಲೆ ಮನವರಿಕೆಯಾಗಿದೆ. ಆದರೂ ಪ್ರಾಮಾಣಿಕ ಪ್ರಯತ್ನ ಮಾಡುವೆನೆಂದು ಭರವಸೆ ನೀಡಿರುವ ಮೋದಿ ಈಗ ಮಾತನ್ನು ಉಳಿಸುವುದು ಬಹು ಮುಖ್ಯವಾಗಿದೆ. ಇದರೊಂದಿಗೆ ಸ್ವಚ್ಛ ಭಾರತ, ಎಲ್ಲರ ವಿಕಾಸದಂತಹ ಘೋಷಣೆಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ನೀಲಿನಕ್ಷೆಯನ್ನು ತಯಾರಿಸಿ ಅದಕ್ಕೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆ ಹೊಸ ಸರಕಾರದ ಮುಂದಿದೆ. ಇದುವರೆಗಿನ ಮೋದಿಯವರ ಭಾಷಣಗಳು ಕೇವಲ ಕನಸುಗಳನ್ನು ಭಿತ್ತಿವೆಯೇ ಹೊರತು ಅದನ್ನು ಕಾರ್ಯರೂಪಕ್ಕಿಳಿಸುವ ಬಗ್ಗೆ ಸ್ಪಷ್ಟವಾದ ದಾರಿಯನ್ನು ತೋರಿಸಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ರಕ್ಷಣೆ, ಶಿಕ್ಷಣ, ಸಂಶೋಧನೆ, ಆರೋಗ್ಯ, ತೆರಿಗೆ ವ್ಯವಸ್ಥೆ... ಹೀಗೆ ಸುಧಾರಣೆಗೆ ಬಾಕಿಯಿರುವ ಹಲವಾರು ಕ್ಷೇತ್ರಗಳು ಸರಕಾರದ ಮುಂದಿದೆ. ಹಣದುಬ್ಬರ ನಿಯಂತ್ರಣ, ಕಡಿಮೆ ದರದ ಮನೆಸಾಲದಂತಹ ಕ್ರಮಗಳು ಜನಸಾಮಾನ್ಯರನ್ನು ತಕ್ಷಣಕ್ಕೆ ತಲುಪುವಂತಹ ವಲಯಗಳು. ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಣಿತರನ್ನು ಪರಿಣಾಮಕಾರಿಯಾಗಿ ಬಳಸಿದರೆ, ಸಂಪನ್ಮೂಲದ ಕ್ರೂಡೀಕರಣ ಮತ್ತು ವಿಂಗಡಣೆಯನ್ನು ವ್ಯವಸ್ಥಿತವಾಗಿ ನಡೆಸಿದರೆ ಮೋದಿಯವರ ಹಾದಿ ಕಠಿಣವಾಗದು. ಜನಸಾಮಾನ್ಯರು ಗುರುತಿಸುವಂತಹ ಬದಲಾವಣೆಗಳನ್ನು ತರುವಲ್ಲಿ ಮೋದಿ ವಿಫಲವಾದರೆ ಅಥವಾ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿದರೆ ಅದಕ್ಕೆ ಮೋದಿ ಮತ್ತು ಅವರ ಪಕ್ಷ ಬೆಲೆ ತೆರಬೇಕಾದೀತು. ಜನರ ನಿರೀಕ್ಷೆಗಳು ಅಧಿಕವಾದರೆ ನಿರಾಸೆಯೂ ಕೂಡ ಅದನ್ನು ಹಿಂಬಾಲಿಸುವ ಸಾಧ್ಯತೆಗಳು ಅಧಿಕವಾಗುತ್ತದೆ ಎಂದುದನ್ನು ಮೋದಿಯವರು ಮರೆಯಬಾರದು.

Monday, March 3, 2014

ಎತ್ತಿನಹೊಳೆ ರಾಜಕೀಯ


ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಉದ್ಘಾಟನೆ ಮತ್ತು ಶಿಲಾನ್ಯಾಸದ ಭರಾಟೆ ಹೆಚ್ಚುತ್ತಿದೆ. ಈ ಅವಸರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ದೃಶ್ಯ ಮಾದ್ಯಮಗಳಿಂದ ತಿಳಿದ ಪ್ರಕಾರ ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರಿನ ಮೆಟ್ರೊ ರೈಲಿನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.ಚುನಾವಣೆ ಸಮೀಪಿಸುತ್ತಿರುವಾಗ ಈ ತರಹದ ಸಭೆ ಸಮಾರಂಭಗಳನ್ನು ಆಯೋಜಿಸಿ ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ ಎಂದು ತೋರಿಸುವುದು ಇದರ ಹಿಂದಿನ ಉದ್ದೇಶ ಎಂಬುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ಇದು ಪಕ್ಷಾತೀತವಾಗಿ ನಡೆದುಬಂದ ಪರಂಪರೆ. ಮಾರ್ಚ್ ೩ರಂದು ಶಿಲಾನ್ಯಾಸ ನಡೆಸಿದ ಎತ್ತಿನಹೊಳೆ ಯೋಜನೆ ಇಷ್ಟಕ್ಕೇ ಸೀಮಿತವಾಗಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಇದು ಚುನಾವಣಾ ರಾಜಕೀಯದ ಭಾಗವಾಗಿ, ಪ್ರಕೃತಿಗೆ ವಿರುದ್ಧವಾಗಿ, ಜೈವಿಕ ಸೂಕ್ಷ್ಮತೆಯುಳ್ಳ ಪಶ್ಚಿಮ ಘಟ್ಟದಲ್ಲಿ ಅನುಷ್ಟಾನಗೊಳ್ಳುತ್ತಿರುವ ಯೋಜನೆ. ಪರಿಸರದ ಸಮತೋಲನ ತಪ್ಪಿದರೆ ಸರಿಪಡಿಸಲಾಗದ ಹಾನಿ ಉಂಟಾಗುವ ಅಪಾಯವಿರುವ ಈ ಯೋಜನೆಯನ್ನು ಇಷ್ಟು ತರಾತುರಿಯಲ್ಲಿ ಅನುಷ್ಟಾನಗೊಳಿಸುವ ಅಗತ್ಯವಿದೆಯೇ ಎಂಬುದು ಇಲ್ಲಿಯ ಮೂಲ ಪ್ರಶ್ನೆ. ಜೊತೆಗೆ ಒಂದು ಜಿಲ್ಲೆಗೆ ನೀರು ಒದಗಿಸಲು ಇನ್ನೊಂದು ಜಿಲ್ಲೆಯ ಜನರಿಂದ ಅದನ್ನು ಕಿತ್ತುಕೊಳ್ಳುವುದು ಪರಿಹಾರವೇ?

ಇಂದು ನಮ್ಮಲ್ಲಿ ನೀರಿನ ಅಭಾವವಿದ್ದರೆ ಅದಕ್ಕೆ ನಾವು ಪ್ರಕೃತಿಗೆ ವಿರುದ್ಧವಾಗಿ ಕಾರ್ಯಯೋಜನೆಗಳನ್ನು ಕೈಗೊಂಡುದೇ ಪ್ರಮುಖ ಕಾರಣ. ಅವೈಜ್ಞಾನಿಕ ನಗರೀಕರಣ ಮತ್ತು ಕೈಗಾರೀಕರಣದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇನ್ನಾದರೂ ಈ ಸತ್ಯವನ್ನು ಅರಿತು ಪರಿಸರ ಸಹ್ಯವಾದ ಯೋಜನೆಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಹನಿ ನೀರಿಗಾಗಿ ಕಿತ್ತಾಡುವ ದಿನ ದೂರವಿಲ್ಲ. ಕೆರೆಗಳ ಪುನಶ್ಚೇತನ ಕೇವಲ ಹಣ ಪೋಲು ಮಾಡುವ ಮಾರ್ಗವಾಗದೆ ಸರಿಯಾದ ರೀತಿಯಲ್ಲಿ ಕಾರ್ಯಗತವಾಗಬೇಕಿದೆ. ಇದೆಲ್ಲವನ್ನು ಬಿಟ್ಟು ಹರಿವ ನದಿಯ ದಿಕ್ಕನ್ನೇ ಬದಲಾಯಿಸುತ್ತೇನೆ (ಆಧುನಿಕ ಭಗೀರಥರು!) ಎಂದು ಹೊರಟರೆ ಅದು ಅತಿ ಬುದ್ಧಿವಂತಿಕೆಯಾದೀತು. ನದಿ ತಿರುವು ಯೋಜನೆಯನ್ನು ಬೆಂಬಲಿಸುವ ವರ್ಗದ ’ವ್ಯರ್ಥವಾಗಿ ಸಮುದ್ರ ಸೇರುವ ನೀರಿನ ಸದ್ಭಳಕ’ ಎಂಬ ಸಮರ್ಥನೆ ವಿಚಿತ್ರವಾಗಿದೆ. ನದಿಯ ನೀರು ಸಮುದ್ರ ಸೇರುವುದನ್ನು ವ್ಯರ್ಥ ಎನ್ನುವ ಮಂದಿಗೆ ಪರಿಸರ ಶಾಸ್ತ್ರವನ್ನು ಆರಂಭದಿಂದ ಕಲಿಸಬೇಕಿದೆ. ಸಮುದ್ರ ಸೇರುವ ನದಿ ನೀರು ಜಲಚಕ್ರದ ಒಂದು ಭಾಗ ಎಂಬುದು ನಮ್ಮ ಪ್ರಾಥಮಿಕ ಶಾಲಾ ಮಕ್ಕಳಿಗೂ ಗೊತ್ತು. ನಮ್ಮನ್ನಾಳುವ ರಾಜಕಾರಣೆಗಳ ಜ್ಞಾನದ ಮಟ್ಟ ಇದಕ್ಕಿಂತಲೂ ಕೆಳಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಇನ್ನು ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಬೃಹತ್ ಕೈಗಾರಿಕೆಗಳು ಇಲ್ಲಿ ಆರಂಭವಾಗಿವೆ. ಜೊತೆಗೆ ಮಂಗಳೂರು ಶೈಕ್ಷಣೆಕ ಕೇಂದ್ರವಾಗಿ ಈಗಾಗಲೇ ಗುರುತಿಸಿಕೊಂಡಿದೆ. ಹೀಗಾಗಿ ಮುಂದೆ ನಗರದ ಅಥವಾ ಒಟ್ಟಾರೆಯಾಗಿ ದಕ್ಷಿಣ ಕನ್ನಡದ ನೀರಿನ ಅಗತ್ಯತೆ ಹೆಚ್ಚುತ್ತಾ ಹೋಗುತ್ತದೆ. ಯೋಜನಾ ವರದಿ ತಯಾರಿಸುವಾಗ ಇದನ್ನು ತಜ್ಞರೆನಿಸಿದವರು ಪರಿಗಣಿಸಿದ್ದಾರೆಯೇ? ಅಲ್ಲದೆ ಯೋಜನೆಯ ಜಾರಿಯಿಂದಾಗುವ ಹಾನಿಯನ್ನು ಈ ಸೂಕ್ಷ ಪರಿಸರ ತಾಳಿಕೊಂಡೀತೆ? ಆದುದರಿಂದ ನೀರಿನ ಕೊರತೆ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ/ ರಾಜಕೀಯ ನಾಯಕರು ಚಿಂತಿಸಬೇಕಿದೆ. ಇಲ್ಲವಾದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ನಷ್ಟ ಅನುಭವಿಸಿ ನದಿಗೆ ಹಾರವಾದರೆ ಆಶ್ಚರ್ಯವಿಲ್ಲ.

Wednesday, December 11, 2013

ಮಡೆ ಸ್ನಾನ - ಒಂದು ಅಭಿಪ್ರಾಯ


ನಂಬಿಕೆ ಎಂಬುದು ಮಾನವಕುಲದಷ್ಟೇ ಪುರಾತನವಾದುದು. ಎಲ್ಲಾ ಕಾಲದಲ್ಲೂ, ಜಗತ್ತಿನ ಎಲ್ಲಾ ಜನಾಂಗದಲ್ಲೂ, ಎಲ್ಲಾ ಧರ್ಮಗಳಲ್ಲೂ ಅವರದೇ ಆದ ನಂಬಿಕೆಗಳು ಇದ್ದವು ಮತ್ತು ಇಂದು ಕೂಡ ಇವೆ. ನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುವ ಗುಂಪು ಸಹ ಅಷ್ಟೇ ಇತಿಹಾಸವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಆಚರಣೆಗಳಲ್ಲಿ ಅಚಲ ನಂಬಿಕೆಯಿರುವ ಮತ್ತು ಪ್ರತಿಯೊಂದನ್ನೂ ಪ್ರಶ್ನಿಸುವ ಅಥವಾ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಗುಂಪುಗಳ ಮದ್ಯೆ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ’ಮಡೆ ಸ್ನಾನ’ ಇಂತಹ ವಿವಾದಿತ ಆಚರಣೆಗಳಲ್ಲಿ ಒಂದು.

ನನ್ನ ಅಭಿಪ್ರಾಯದ ಪ್ರಕಾರ ’ನಂಬಿಕೆ’ ಎಂಬ ಶಬ್ಧವೇ ತಿಳಿಸುವಂತೆ ಅದು ವೈಜ್ಞಾನಿಕ ಪ್ರಯೋಗ ಅಥವಾ ಅಧ್ಯಯನಗಳ ಮೂಲಕ ಸಾಧಿಸಲಾಗದ ವಿಷಯ. ಹಾಗೇನಾದರೂ ಸಾಧಿಸಲು ಸಾದ್ಯವಾದರೆ ಆಗ ಅದು ’ನಂಬಿಕೆ’ ಎಂಬುದರ ಬದಲು ’ಸತ್ಯ’ ಎಂದು ಕರೆಯಲು ಯೋಗ್ಯವೆನಿಸುತ್ತದೆ. ಆದುದರಿಂದ ಮೊತ್ತ ಮೊದಲನೆಯದಾಗಿ ನಂಬಿಕೆಯನ್ನು ವೈಜ್ಞಾನಿಕತೆಯ ದುರ್ಬೀನಿನಿಂದ ನೋಡುವುದನ್ನು ನಿಲ್ಲಿಸಬೇಕು. ನಂಬಿಕೆಗಳು ಆಯಾ ಪ್ರದೇಶಗಳಲ್ಲಿ ಅಲ್ಲಿನ ಸನ್ನಿವೇಶ ಮತ್ತು ಸಂದರ್ಭಕ್ಕೆ ಸರಿಯಾಗಿ ಹುಟ್ಟಿಕೊಂಡಂತಹುಗಳು. ಆದುದರಿಂದ ಅವು ಸಾರ್ವಕಾಲಿಕ ಅಥವಾ ಸಾರ್ವತ್ರಿಕವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಂಬಿಕೆಗಳು ಮತ್ತು ಅದಕ್ಕನುಗುಣವಾಗಿ ಹುಟ್ಟಿಕೊಂಡ ಆಚರಣೆಗಳು ಕಾಲಾಂತರದಲ್ಲಿ ಮಾರ್ಪಾಡು ಹೊಂದುವುದು ಇಲ್ಲವೇ ಸನ್ನಿವೇಶ ಮತ್ತು ಸಂದರ್ಭಕ್ಕನುಸಾರವಾಗಿ ಅವುಗಳನ್ನು ಮಾರ್ಪಾಡುಗೊಳಿಸುವುದು ಸರಿಯಾಗಿಯೇ ಇದೆ. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಮಡೆ ಸ್ನಾನವನ್ನು ಈ ಮೇಲೆ ವಿವರಿಸಿದ ರೀತಿಯಲ್ಲಿ ನೋಡುತ್ತಿದ್ದರೆ ಅದು ಇಷ್ಟೊಂದು ವಿವಾದದ ವಿಷಯವಾಗುತ್ತಿರಲಿಲ್ಲ. ಅನಾದಿ ಕಾಲದಿಂದ ನಡೆದು ಬಂದ ಆಚರಣೆ ಎಂಬ ಏಕೈಕ ವಾದಕ್ಕೆ ಅಂಟಿಕೊಂಡು, ಅದು ಇಂದಿಗೆ ಪ್ರಸ್ತುತವೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತಯಾರಿರದ ಗುಂಪು ಒಂದು ಕಡೆಯಿದ್ದರೆ, ಇನ್ನು ಅದಕ್ಕೆ ಜಾತಿಯ ಲೇಪನ ಮಾಡಿ ಸಮಾಜದಲ್ಲಿ ಗೊಂದಲ-ಒಡಕು ಮೂಡಿಸುವ ಮೂಲಕ ತಮ್ಮ ಲಾಭಕ್ಕಾಗಿ ಇದನ್ನು ವಿರೋಧಿಸುವ (ಉಪಯೋಗಿಸುವ?) ಗುಂಪು ಇನ್ನೊಂದು ಕಡೆಯಿದೆ. ಇವರನ್ನು ಒಂದೆಡೆ ಸೇರಿಸಿ ಚರ್ಚಿಸುವ ವೇದಿಕೆ ಕಲ್ಪಿಸಲು ಕೆಲವು ಗಣ್ಯರು ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಇನ್ನು ಈ ಪದ್ಧತಿಯನ್ನು ಆಚರಿಸುವ ಮಂದಿ ಯಾರದೋ ಒತ್ತಡಕ್ಕೆ ಇದನ್ನು ಮಾಡುತ್ತಿಲ್ಲ ಮತ್ತು ಅವರಲ್ಲಿ ಎಲ್ಲಾ ಜಾತಿಯ ಮಂದಿಯೂ ಇದ್ದಾರೆ ಎಂಬುದೂ ಗಮನಿಸಬೇಕಾದ ವಿಷಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದರ ಬಗೆಗಿನ ವಸ್ತುನಿಷ್ಠ ಚಿಂತನೆ ಅಗತ್ಯವೆಂಬುದು ನನ್ನ ಅಭಿಪ್ರಾಯ. ಆಚರಣೆಯ ಇತಿಹಾಸವನ್ನು ಕೆದಕುವುದರ ಬದಲು ಇಂದಿನ ಸಮಾಜ ಮತ್ತು ನಾಗರಿಕತೆಗೆ ಇದು ಪ್ರಸ್ತುತವೋ ಎಂಬ ಪ್ರಶ್ನೆ ಮಹತ್ವದ್ದಾಗಿದೆ. ಅಲ್ಲದೆ ಇದನ್ನು ಕಾನೂನಿನ ಮೂಲಕ ನಿಷೇಧಿಸುವುದರ ಬದಲು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವುದರ ಜೊತೆಗೆ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಸಹಕಾರಿಯಾದೀತು. ಈ ನಿಟ್ಟಿನಲ್ಲಿ ಎರಡೂ ಗುಂಪುಗಳು ಚಿಂತಿಸಲಿ ಎಂಬುದೇ ನನ್ನ ಹಾರೈಕೆ.