Saturday, May 16, 2026

ಮೂರನೇ ಭಾಷೆ: ಒತ್ತಡ ಕಡಿತವೇ ಅಥವಾ ಗೊಂದಲ ಸೃಷ್ಟಿಯೇ?

ಇತ್ತೀಚೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ “ಮೂರನೇ ಭಾಷೆಯ ಅಂಕಗಳನ್ನು ಪರಿಗಣಿಸದೆ, ಕೇವಲ ಗ್ರೇಡ್ ಮಾತ್ರ ನೀಡುವುದು” ಎಂಬ ನಿರ್ಧಾರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಉದ್ದೇಶ “ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು” ಎಂದು ಹೇಳಲಾಗುತ್ತಿದೆ. ಆದರೆ, ಪರೀಕ್ಷೆಗೆ ಕೇವಲ ಕೆಲವು ದಿನಗಳು ಬಾಕಿ ಇರುವಾಗ ಇಂತಹ ಘೋಷಣೆ ಮಾಡುವುದು ನಿಜವಾಗಿಯೂ ವಿದ್ಯಾರ್ಥಿಗಳಿಗೆ ಉಪಕಾರವಾಗುತ್ತದೆಯೇ ಎಂಬ ಪ್ರಶ್ನೆ ಗಂಭೀರವಾಗಿ ಉದ್ಭವಿಸುತ್ತದೆ.

ಮೊದಲು, ಸಮಯದ ಪ್ರಶ್ನೆ. ವಿದ್ಯಾರ್ಥಿಗಳು ಒಂದು ವರ್ಷದವರೆಗೆ ಮೂರನೇ ಭಾಷೆಯನ್ನು ಅಂಕಗಳ ದೃಷ್ಟಿಯಿಂದಲೇ ಓದಿರುತ್ತಾರೆ. ಅವರು ತಮ್ಮ ಸಮಯ, ಶ್ರಮ, ಯೋಜನೆಗಳನ್ನು ಅದಕ್ಕೆ ಅನುಗುಣವಾಗಿ ಹಂಚಿಕೊಂಡಿರುತ್ತಾರೆ. ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ನಿಯಮ ಬದಲಿಸುವುದು ಅವರ ತಯಾರಿಯನ್ನು ಅಸ್ಪಷ್ಟಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದಕ್ಕಿಂತ, ಗೊಂದಲವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ, ಈ ನಿರ್ಧಾರವು “ಶೈಕ್ಷಣಿಕ ಸುಧಾರಣೆ”ಗಿಂತ “ತುರ್ತು ಆಡಳಿತಾತ್ಮಕ ಕ್ರಮ” ಅಥವಾ “ರಾಜಕೀಯ ನಿರ್ಧಾರ” ಎಂಬ ಅನುಮಾನ ಮೂಡುವುದು ಸಹಜ. ಎರಡನೆಯದಾಗಿ, ಶಿಕ್ಷಣ ಕ್ಷೇತ್ರದ ಸುಧಾರಣೆಯಂತ ಪ್ರಮುಖ ನಿರ್ಧಾರಗಳು ತಜ್ಞರ ಜೊತೆಗಿನ ಚರ್ಚೆಯ ಮೇಲೆ ಆಧಾರಿತವಾಗಿರಬೇಕು. ಶಿಕ್ಷಣತಜ್ಞರು, ಶಿಕ್ಷಕರು, ಮನೋವೈಜ್ಞಾನಿಕರು, ಹಾಗೂ ಮೌಲ್ಯಮಾಪನ ತಜ್ಞರ ಸಮಗ್ರ ಚರ್ಚೆಯ ನಂತರವೇ ಬದಲಾವಣೆಗಳನ್ನು ಜಾರಿಗೆ ತರಬೇಕು. ಒಂದು ಮೌಲ್ಯಮಾಪನ ವ್ಯವಸ್ಥೆಯನ್ನು ಬದಲಿಸುವುದು ಸರಳ ಆಡಳಿತಾತ್ಮಕ ನಿರ್ಧಾರವಲ್ಲ — ಅದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಭಾವಿಸುತ್ತದೆ. ಮುಖ್ಯವಾಗಿ, ಅಂಕಿ-ಅಂಶಗಳ ಆಳವಾದ ಅಧ್ಯಯನ ನಡಯಬೇಕು. ವಿಷಯವಾರು ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ, ಕೇವಲ ತೃತೀಯ ಭಾಷೆಯಲ್ಲಿ ಮಾತ್ರ ಅನುತ್ತೀರ್ಣರಾದ ಕಾರಣದಿಂದ ೧೦ನೇ ತರಗತಿಯನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳ ಪ್ರಮಾಣ - ಮುಂತಾದ ಅಂಶಗಳು ಈ ತರಹದ ಬದಲಾವಣೆಗೆ ಪೂರಕವಾದ ಕಾರಣಗಳನ್ನು ಒದಗಿಸುತ್ತವೆ. ಆದರೆ, ಈ ಸಂದರ್ಭದಲ್ಲಿ ಅಂತಹ ಅಧ್ಯಯನಗಳು ನಡೆದಿರುವುದೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ನಡೆದಿದ್ದರೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ ಗೊಂದಲಗಳ ನಿವಾರಣೆಗೆ ಸಹಾಯವಾಗುತ್ತದೆ.

ಇನ್ನು ಈ ಪ್ರಕ್ರಿಯೆಯಿಂದ ಉಳಿದ ವಿಷಯಗಳ ಅಧ್ಯಯನಕ್ಕೆ ಹೆಚ್ಚಿನ ಸಮಯ ವಿನಿಯೋಗಿಸಬಹುದು ಎಂಬ ವಾದಕ್ಕೆ ಬರೋಣ. ಆದರೆ ಈಗಾಗಲೇ ಪರೀಕ್ಷೆಗಳು ಆರಂಭವಾಗಿದ್ದು, ತೃತೀಯ ಭಾಷೆಯನ್ನು ಅಂಕಗಳ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಈ ಬಾರಿಯ ೧೦ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ತರುವ ಸಾದ್ಯತೆ ಕಡಿಮೆ. ಹಾಗೆಯೇ, ಗಣಿತದಂತಹ ವಿಷಯಗಳಲ್ಲಿ ತೇರ್ಗಡೆಯ ಪ್ರಮಾಣ ಕಡಿಮೆಯಿರಲು ಓದುವಿಕೆಗೆ ವಿನಿಯೋಗಿಸುವ ಸಮಯದ ಅಭಾವವೇ ಕಾರಣ ಎಂಬುದರ ಬಗ್ಗೆ ಖಚಿತತೆ ಇಲ್ಲ. ವಿಷಯದ ಗ್ರಹಿಸುವಿಕೆಯಲ್ಲಿ ಸಮಸ್ಯೆಯಿದ್ದರೆ ಹೆಚ್ಚಿನ ಸಮಯದ ವಿನಿಯೋಗವೊಂದೇ ಪರಿಹಾರ ನೀಡಿವುದಿಲ್ಲ. ಪೂರಕವಾದ ಕಲಿಕಾ ಕ್ರಮ, ಅದಕ್ಕೆ ಬೇಕಾದ ಸಿದ್ಧತೆಗಳು, ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ - ಇತ್ಯಾದಿ ಅಂಶಗಳೂ ಫಲಿತಾಂಶ ಸುಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಇನ್ನೊಂದು ಮುಖ್ಯ ವಿಷಯ — ನಿಜವಾದ ಒತ್ತಡದ ಮೂಲವೇನು? ವಿದ್ಯಾರ್ಥಿಗಳ ಒತ್ತಡಕ್ಕೆ ಮುಖ್ಯ ಕಾರಣ ಅಂಕಪದ್ದತಿ ಮಾತ್ರವಲ್ಲ, ಪ್ರಶ್ನಾಪತ್ರಿಕೆಯ ಸ್ವರೂಪವೂ ಆಗಿದೆ. ನೀಡಿರುವ ಮಾದರಿ ಪ್ರಶ್ನಾಪತ್ರಿಕೆಗಳಲ್ಲಿ (https://kseeb.karnataka.gov.in/QP2026/SSLC2025-26MODEL_QP) ಕಾಣುವಂತೆ, ಬಹುಪಾಲು ಪ್ರಶ್ನೆಗಳು ಪಾಠಪಠ್ಯದ ನೆನಪಿನ ಮೇಲೆ ಅವಲಂಬಿತವಾಗಿವೆ. “ಮನಪಾಠದಿಂದ ಉಲ್ಲೇಖಿಸಿ”, “ವಿವರಿಸಿ…” / “ವಿವರಣೆ ನೀಡಿ…”, “ಯಾರು…?” ಇತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ, ಪಾಠವನ್ನು ಮನಪಾಠ ಮಾಡಲು ಪ್ರೇರೇಪಿಸುತ್ತವೆ. ಇದೇ ಒತ್ತಡದ ಪ್ರಮುಖ ಕಾರಣ. ಪ್ರಮುಖವಾಗಿ, ತೃತೀಯ ಭಾಷೆಯೂ ಸೇರಿದಂತೆ, ಭಾಷಾ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಭಾಷೆಯ ಗ್ರಹಿಕೆ ಮತ್ತು ಬಳಕೆಯ ಮೌಲ್ಯಮಾಪನ ಹೆಚ್ಚು ಅರ್ಥಪೂರ್ಣ. ವಾಸ್ತವವಾಗಿ, ನಿಜವಾದ ಪರಿಹಾರ ಪ್ರಶ್ನಾಪತ್ರಿಕೆಯ ವಿನ್ಯಾಸದಲ್ಲಿದೆ ಮತ್ತು ಈ ಕೆಳಗಿನ ಬದಲಾವಣೆಗಳು ಅಗತ್ಯ ಎನ್ನುವುದು ನನ್ನ ನಿಲುವು.

  • ಅರ್ಥಗ್ರಹಣ (comprehension) ಆಧಾರಿತ ಪ್ರಶ್ನೆಗಳು ಹೆಚ್ಚಿಸಬೇಕು

  • ವಿಶ್ಲೇಷಣಾತ್ಮಕ (analytical) ಮತ್ತು ಅಭಿಪ್ರಾಯಾತ್ಮಕ (opinion-based) ಪ್ರಶ್ನೆಗಳನ್ನು ಸೇರಿಸಬೇಕು

  • ಪಾಠಪಠ್ಯದ ನೇರ ನೆನಪು ಆಧಾರಿತ ಪ್ರಶ್ನೆಗಳನ್ನು ಕಡಿಮೆ ಮಾಡಬೇಕು

  • ಅನ್ವಯಾತ್ಮಕ (application-based) ಪ್ರಶ್ನೆಗಳ ಪ್ರಮಾಣ ಹೆಚ್ಚಿಸಬೇಕು

ಈ ರೀತಿಯ ಬದಲಾವಣೆಗಳು ವಿದ್ಯಾರ್ಥಿಗಳಲ್ಲಿ ವಿಷಯದ ಮೇಲೆ ಆಸಕ್ತಿ, ಚಿಂತನೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸುತ್ತವೆ. “ಶಿಕ್ಷಣವೆಂದರೆ ಮಾನವನೊಳಗೆ ಈಗಾಗಲೇ ಅಡಕವಾಗಿರುವ ಪರಿಪೂರ್ಣತೆಯ ಅಭಿವ್ಯಕ್ತಿ.” ಎನ್ನುವ ಸ್ವಾಮಿ ವಿವೇಕಾನಂದರ ಪರಿಕಲ್ಪನೆ ಇಲ್ಲಿ ಉಲ್ಲೇಖ-ಯೋಗ್ಯ. ಇದೇ ಶಿಕ್ಷಣದ ನಿಜವಾದ ಉದ್ದೇಶ. ಈ ಹಿನ್ನೆಲೆಯಲ್ಲೇ, ಕೆಲವು ಮೂಲಭೂತ ಪ್ರಶ್ನೆಗಳು ಉದ್ಭವಿಸುತ್ತವೆ: ಒತ್ತಡ ಕಡಿಮೆ ಮಾಡಬೇಕಾದರೆ, ಕೇವಲ ಮೂರನೇ ಭಾಷೆಯ ಅಂಕಗಳನ್ನು ತೆಗೆದುಹಾಕುವುದೇ ಪರಿಹಾರವೇ? ಅಥವಾ ಸಂಪೂರ್ಣ ಮೌಲ್ಯಮಾಪನ ವ್ಯವಸ್ಥೆಯನ್ನೇ ಪರಿಷ್ಕರಿಸಬೇಕೇ? ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ.

ಇನ್ನು, ಈ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಬದಲಾವಣೆಯು ೧೯೬೦ರ ದಶಕದಲ್ಲಿ ಜಾರಿಗೆ ಬಂದ ತ್ರಿಭಾಷಾ ಸೂತ್ರದಿಂದ ಕರ್ನಾಟಕವು ಹಿಂದೆ ಸರಿಯುವ ಮೊದಲ ಹೆಜ್ಜೆ ಎಂದೂ ವಿಶ್ಲೇಷಿಸಲಾಗುತ್ತಿದೆ. NEP ಮತ್ತು SEPಗಳ ಮೂಲಕ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ನಡೆದ ತಿಕ್ಕಾಟ ಮತ್ತು ಈಗಿನ ರಾಜ್ಯ ಸರಕಾರ NEPಯಿಂದ ಹೊರಬರುವ ನಿರ್ಧಾರವನ್ನು ಈ ಹಿಂದೆ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ತರ್ಕಿಸಿದರೆ ಈ ಅನುಮಾನ ಸಹಜವಾಗಿದೆ. ಇದು ಹೌದೇ ಆದಲ್ಲಿ ಇಂತಹ ಮಹತ್ವದ ನಿರ್ಧಾರಗಳು ತಜ್ಞರ ಅಭಿಪ್ರಾಯಗಳ ತಳಹದಿಯಲ್ಲಿ ರೂಪುಗೊಳ್ಳಬೇಕು ಮತ್ತು ಇದರ ಸಾಧಕ - ಬಾಧಕಗಳ ವಿಮರ್ಶೆ ನಡೆಯಬೇಕು. ಆದುದರಿಂದ ಈ ನಿಟ್ಟಿನಲ್ಲಿ ಸರಕಾರದ ನಿಲುವು ಏನು ಎಂಬುದರ ಬಗ್ಗೆ ಸರಕಾರ ಕರ್ನಾಟಕದ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.

ಬದಲಾವಣೆ ಜಗದ ನಿಯಮ. ತಂತ್ರಜ್ಞಾನ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಬದಲಾವಣೆಗೆ ಮೈಯೊಡ್ಡಿವೆ. ಹಾಗಾಗಿ, ಇಂದಿನ ಅಗತ್ಯತೆಗೆ ತಕ್ಕಂತೆ ಕೌಶಲ್ಯಭರಿತ ಮಾನವ ಸಂಪನ್ಮೂಲದ ತಯಾರಿಯೂ ಶಿಕ್ಷಣ ಕ್ಷೇತ್ರದ ಬಹದೊಡ್ಡ ಜವಾಬ್ದಾರಿ. ಆದುದರಿಂದ ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರದ ಸುಧಾರಣೆ ಅನಿವಾರ್ಯ ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಇದು ಯೋಜನಾಬದ್ಧವಾದ ಪ್ರಕ್ರಿಯೆಯಾಗಿರಬೇಕು. ಪಠ್ಯಕ್ರಮ ಮತ್ತು ಮೌಲ್ಯಮಾಪನ ಕ್ರಮಗಳಲ್ಲಿ ಬದಲಾವಣೆಗೆ ಮುನ್ನ ಸಾಕಷ್ಟು ಪೂರ್ವ ತಯಾರಿಗಳು ಅಗತ್ಯ. ಮುಖ್ಯವಾಗಿ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯ , ಶಿಕ್ಷಣತಜ್ಞರ ಚಿಂತನೆಗಳ ಒಳಗೊಳ್ಳುವಿಕೆ ಅನಿವಾರ್ಯ. ಹೀಗೆ ಸಾಕಷ್ಟು ಚರ್ಚೆ ಮತ್ತು ಚಿಂತನೆಗಳಿಂದ ರೂಪುಗೊಂಡ ಬದಲಾವಣೆಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಘೋಷಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಗಳು ತಮ್ಮ ತಯಾರಿಯನ್ನು ಅದಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಮಯ ಸಿಗುತ್ತದೆ. ಹಾಗೆಯೇ ಬದಲಾದ ಮೌಲ್ಯಮಾಪನ ವ್ಯವಸ್ಥೆಗೆ ಅನುಗುಣವಾಗಿ ತರಗತಿಗಳನ್ನು ಹೊಂದಿಸಿಕೊಳ್ಳುವುದು ಸಾದ್ಯವಾಗುತ್ತದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿಯಮ ಬದಲಿಸುವುದು ಶೈಕ್ಷಣಿಕ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ. ಪರೀಕ್ಷಾ ತಯಾರಿ ಎಂದರೆ ಒಂದು ವರ್ಷದ ಶಿಸ್ತುಬದ್ಧ ಪ್ರಕ್ರಿಯೆ. ಅದು ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲಲು ಚುನಾವಣೆಯ ಕೆಲವೇ ದಿನಗಳ ಮುನ್ನ ನಡೆಸುವ ತಯಾರಿಗಿಂತ ಭಿನ್ನ. ಶಿಕ್ಷಣದಲ್ಲಿ ತುರ್ತು ನಿರ್ಧಾರಗಳಿಗೆ ಸ್ಥಳವಿಲ್ಲ. ಇಲ್ಲಿ ಸ್ಥಿರತೆ, ಯೋಜನೆ ಮತ್ತು ಪಾರದರ್ಶಕತೆ ಅತ್ಯಂತ ಮುಖ್ಯ.

ಕೊನೆಯದಾಗಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಒಳ್ಳೆಯ ಉದ್ದೇಶವೇ ಸರಿ. ಆದರೆ, ಅದು ಸರಿಯಾದ ಸಮಯದಲ್ಲಿ, ತಜ್ಞರ ಸಲಹೆಗಳೊಂದಿಗೆ, ಹಾಗೂ ಮೂಲ ಸಮಸ್ಯೆಯನ್ನು ಗುರಿಯಾಗಿಸಿಕೊಂಡು ಮಾಡಬೇಕಾಗಿದೆ. ಇಲ್ಲವಾದರೆ, ಇಂತಹ ಕ್ರಮಗಳು “ಶೈಕ್ಷಣಿಕ ಸುಧಾರಣೆ” ಎಂದು ಕಾಣಿಸಿಕೊಳ್ಳುವುದಕ್ಕಿಂತ, “ರಾಜಕೀಯ ಅಜೆಂಡಾ” ಎಂಬ ಅನುಮಾನವನ್ನು ಹೆಚ್ಚಿಸುವುದರಲ್ಲಿ ಆಶ್ಚರ್ಯವಿಲ್ಲ.

(ಈ ಲೇಖನವು ಎಪ್ರಿಲ್ ೧, ೨೦೨೬ರ ಉದಯವಾಣಿಯಲ್ಲಿ ಪ್ರಕಟಗೊಂಡಿದೆ

Thursday, January 29, 2026

ಬೆಳೆ ವಿಮೆ : ಏನು ಮತ್ತು ಹೇಗೆ?

 ಬೆಳೆ ವಿಮೆ ಎಂಬುದು ಕೃಷಿ ಕ್ಷೇತ್ರದಲ್ಲಿ ಎದುರಾಗುವ ಅಸ್ಥಿರತೆ ಮತ್ತು ಅನಿಶ್ಚಿತತೆಗೆ ವಿರುದ್ಧವಾಗಿ ರೈತರಿಗೆ ಆರ್ಥಿಕ ಭದ್ರತೆ ನೀಡುವ ಅತ್ಯಂತ ಪ್ರಮುಖ ಸಾಧನವಾಗಿದೆ. ಭಾರತಂಥ ಮಳೆ ಆಧಾರಿತ ಕೃಷಿ ವ್ಯವಸ್ಥೆಯಲ್ಲಿ ಬರ, ನೆರೆ, ಚಂಡಮಾರುತ, ಕೀಟ–ರೋಗಗಳು, ಮತ್ತು ಮಾರುಕಟ್ಟೆ ಅಸ್ಥಿರತೆಗಳು ರೈತರಿಗೆ ದೊಡ್ಡ ಆರ್ಥಿಕ ಆಘಾತಗಳನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭದಲ್ಲಿ ವಿಮೆ ರೈತರ ಆದಾಯವನ್ನು ಸ್ಥಿರಗೊಳಿಸಿ, ನಷ್ಟದ ಹೊರೆ ಅವರನ್ನು ತತ್ತರಿಸದಂತೆ ಕಾಪಾಡುತ್ತದೆ. ಈ ಲೇಖನದಲ್ಲಿ ವಿಮೆ ಎಂದರೇನು, ಅದು ಯಾಕೆ ಅಗತ್ಯ, ಕೃಷಿ ವಿಮೆಯ ಸ್ವರೂಪವೇನು, ಹಾಗೂ ಬೆಳೆ ವಿಮೆಯ ಎರಡು ಪ್ರಮುಖ ಮಾದರಿಗಳಾದ Yield-based ಮತ್ತು Weather-based ವಿಮೆಗಳ ತತ್ವಗಳು, ಗಣಿತೀಯ ಸಮೀಕರಣಗಳು, ಉದಾಹರಣೆಗಳು ಹಾಗೂ ಭಾರತದಲ್ಲಿನ PMFBY ಮತ್ತು WBCIS ಯೋಜನೆಗಳ ವಿವರಗಳನ್ನು ವಿಸ್ತಾರವಾಗಿ ತಿಳಿಸಲಾಗಿದೆ.


ವಿಮೆ ಎಂದರೆ ವಿಮಾ ಕಂಪನಿ (insurer) ಎಂದರೆ ನಷ್ಟ ಸಂಭವಿಸಿದಾಗ ಪರಿಹಾರ ನೀಡುವುದಾಗಿ ಒಪ್ಪಿಕೊಂಡಿರುವ ವ್ಯಕ್ತಿ/ಸಂಸ್ಥೆ, ಮತ್ತು ವಿಮಾ ಪಾಲುದಾರ (insured) ಎಂದರೆ ಆ ಭದ್ರತೆಗಾಗಿ ಪ್ರೀಮಿಯಂ ಪಾವತಿಸುವ ವ್ಯಕ್ತಿ ಇವರ ನಡುವೆ ನಡೆದ ಒಪ್ಪಂದ. ವಿಮೆಯ ಮೂಲ ತತ್ವ ‘ಸಾಮೂಹಿಕ ಅಪಾಯ ಹಂಚಿಕೆ’. ಅಂದರೆ, ಅನೇಕ ಜನರು ಅಲ್ಪ ಪ್ರಮಾಣದ ಪ್ರೀಮಿಯಂ ಪಾವತಿಸುವುದರಿಂದ, ನಷ್ಟ ಅನುಭವಿಸಿದ ಕೆಲವರಿಗೆ ಪರಿಹಾರ ನೀಡಲು ಸಾಕಷ್ಟು ನಿಧಿ ಸಂಗ್ರಹಗೊಳ್ಳುತ್ತದೆ. ಇದರಿಂದ ವ್ಯಕ್ತಿಗೋ, ರೈತಾನಿಗೋ ಆದ ನಷ್ಟ ಒಬ್ಬನೇ ವ್ಯಕ್ತಿಯ ಮೇಲೆ ಹೇರಿಕೆಯಾಗದೆ, ಸಮೂಹದೊಳಗೆ ಹಂಚಿಕೆ ಆಗುತ್ತದೆ.
ಕೃಷಿ ವಿಮೆಯು ಇದೇ ತತ್ವದ ಮೇಲಾಗಿದ್ದರೂ, ಇದರ ಅಪಾಯ ಗಾತ್ರ ಮತ್ತು ಸ್ವರೂಪ ತುಂಬಾ ಸಂಕೀರ್ಣ. ಹವಾಮಾನ ಆಧಾರಿತ ಕೃಷಿ ಸ್ವಭಾವತಃ ಅನಿಶ್ಚಿತ. ರೈತರು ಕಡಿಮೆ ಲಾಭಾಂಶದ ಮೇಲೆ ಕೆಲಸ ಮಾಡುವುದರಿಂದ ಒಂದು ದೊಡ್ಡ ನಷ್ಟವನ್ನು ತಡೆಯಲು ಸಾಮರ್ಥ್ಯವಿಲ್ಲ. ಹೀಗಾಗಿ, ನಷ್ಟದ ಹೊರೆ ಕಡಿಮೆ ಮಾಡುವ ಮತ್ತು ಆರ್ಥಿಕ ಸ್ಥಿರತೆಯನ್ನು ನೀಡುವ ವ್ಯವಸ್ಥೆಯಾಗಿರುವ ಬೆಳೆ ವಿಮೆ ಅನಿವಾರ್ಯವಾಗುತ್ತದೆ. ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ಬೆಳೆ ವಿಮೆ ಕ್ರಮೇಣ ಅಭಿವೃದ್ಧಿ ಹೊಂದಿದೆ. ಇಂದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು Weather Based Crop Insurance Scheme (WBCIS) ದೇಶದ ಪ್ರಮುಖ ಬೆಳೆ ವಿಮೆ ರೂಪಗಳು. ಇವು ಎರಡೂ ರೈತರಿಗೆ ರಕ್ಷಣೆಯನ್ನು ನೀಡುವಲ್ಲಿ ಒಂದೇ ಗುರಿ ಇಟ್ಟಿದ್ದರೂ, ನಷ್ಟ ಅಂದಾಜಿಸುವ ವಿಧಾನದಲ್ಲಿ ಪರಸ್ಪರ ಬೇರೆಯಾದ ತಂತ್ರಗಳನ್ನು ಬಳಸುತ್ತವೆ.

Yield-based ಬೆಳೆ ವಿಮೆ ಎಂದರೆ, ನಿರ್ದಿಷ್ಟ ಪ್ರದೇಶದ ವಾಸ್ತವ ಉತ್ಪಾದನೆ (Actual Yield - AY) ಮತ್ತು ಗರಿಷ್ಠದ ಹಿನ್ನಲೆ ಆಧಾರದ ಮೇಲೆ ಗಣನೆ ಮಾಡಲಾದ Threshold Yield (TY) ಅನ್ನು ಹೋಲಿಕೆ ಮಾಡಿ ನಷ್ಟವನ್ನು ನಿಗದಿಪಡಿಸುವ ವಿಧಾನ. Threshold Yield ಅನ್ನು ಕೆಳಗಿನ ಸಮೀಕರಣದಿಂದ ಲೆಕ್ಕ ಹಾಕಲಾಗುತ್ತದೆ:
TY = Historical Average Yield × (Indemnity Level / 100)
ಇಲ್ಲಿ Indemnity Level ಪ್ರದೇಶದ ಅಪಾಯ ಮಟ್ಟವನ್ನು ಸೂಚಿಸುತ್ತದೆ — ಸಾಮಾನ್ಯವಾಗಿ 70%, 80% ಅಥವಾ 90%. ವಾಸ್ತವ ಉತ್ಪಾದನೆ (AY)ಯನ್ನು ಬೆಳೆ ಕಟಾವಿನ ಪರೀಕ್ಷೆಯ (CCE) ಮೂಲಕ ಅಳೆಯಲಾಗುತ್ತದೆ.
ಈ ಮಾದರಿಯಲ್ಲಿ AY < TY ಆಗಿದ್ದರೆ ರೈತರಿಗೆ ಪರಿಹಾರ ನೀಡಲಾಗುತ್ತದೆ. ಪರಿಹಾರ ಲೆಕ್ಕ ಹಾಕುವ ಸಮೀಕರಣ:
Claim = ((TY – AY) / TY) × Sum Insured
ಉದಾಹರಣೆ:
ಒಂದು ಪ್ರದೇಶದಲ್ಲಿ ನಿರ್ದಿಷ್ಟ ಬೆಳೆಯೊಂದರ ಸರಾಸರಿ ಉತ್ಪಾದನೆ 20 ಕ್ವಿಂಟಲ್/ಹೆಕ್ಟೇರ್ ಆಗಿದ್ದು, Indemnity level = 80% ಆಗಿದ್ದರೆ, TY = 20 × (80/100) = 16 ಕ್ವಿಂಟಲ್/ಹೆಕ್ಟೇರ್ ಆಗುತ್ತದೆ. ಒಂದು ವೇಳೆ ಆ ವರ್ಷದ AY = 10 ಕ್ವಿಂಟಲ್/ಹೆಕ್ಟೇರ್ ಆಗಿದ್ದರೆ, Loss % = (16 – 10) / 16 = 0.375. Sum insured = ₹40,000 ಎಂದು ಭಾವಿಸಿದರೆ, Claim = 0.375 × 40,000 = ₹15,000 ಆಗುತ್ತದೆ. ಈ ವಿಧಾನದಲ್ಲಿ ನಷ್ಟವನ್ನು ನೈಜ ಉತ್ಪಾದನೆಯ ಆಧಾರದ ಮೇಲೆ ಅಂದಾಜಿಸುವುದರಿಂದ ನಿಖರತೆ ಹೆಚ್ಚಾದರೂ, CCEಗಳನ್ನು ಸಮಯಕ್ಕೆ ಸರಿಯಾಗಿ ನಡೆಸದಿರುವುದು ಅಥವಾ ಮಾಪನದ ದೋಷಗಳಿಂದ ಪರಿಹಾರ ವಿತರಣೆಯಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ.

Weather-based crop insurance (WBCIS) ನಲ್ಲಿ ವಾಸ್ತವ ಉತ್ಪಾದನೆಯನ್ನು ಅಳೆಯುವುದಿಲ್ಲ. ಬದಲಿಗೆ, ಬೆಳೆ ಬೆಳವಣಿಗೆಗೆ ಮುಖ್ಯವಾದ ಹವಾಮಾನ ಸೂಚಕಗಳನ್ನು ಬಳಸಲಾಗುತ್ತದೆ — ಉದಾಹರಣೆಗೆ ಮಳೆ ಪ್ರಮಾಣ, ತಾಪಮಾನ, ಗಾಳಿ ವೇಗ, ಆರ್ದ್ರತೆ ಇತ್ಯಾದಿ. ಈ ಮೌಲ್ಯಗಳು ನಿರ್ದಿಷ್ಟ ಗರಿಷ್ಠ/ಕನಿಷ್ಠ ಮಟ್ಟಗಳನ್ನು ದಾಟಿದಾಗ ವಿಮಾ ಪರಿಹಾರ 'Trigger'' ಆಗುತ್ತದೆ.
ಉದಾಹರಣೆಗೆ, Rainfall deficit
Rainfall Deficit = max(0, R_threshold – R_actual)
Trigger point (T), Exit point (E), ಮತ್ತು Payout rate (PR) ಬಳಸಿ ಪರಿಹಾರವನ್ನು ನಿಗದಿಪಡಿಸಲಾಗುತ್ತದೆ:
Claim = min[(Deficit × PR), Maximum Sum Insured]

ಲೆಕ್ಕಾಚಾರದ ಉದಾಹರಣೆ:
R_threshold = 150 mm
R_actual = 90 mm
Deficit = 150 – 90 = 60 mm
PR = ₹100/mm
Max payout = ₹8000
Claim = min(60 × 100, 8000) = ₹6000
ಇದು ಸಂಪೂರ್ಣ ಸೂಚಕ ಆಧಾರಿತವಾಗಿರುವುದರಿಂದ ಪರಿಹಾರ ವಿತರಣೆ ವೇಗವಾಗಿ ನೆರವೇರುತ್ತದೆ. ಆದರೆ Weather index ಯಾವಾಗಲೂ ರೈತರಿಗೆ ಸಂಭವಿಸುವ ನಷ್ಟವನ್ನು ಸಮರ್ಪಕವಾಗಿ ಪ್ರತಿಬಿಂಬಿಸದೆ ಇರುವ ಸಾಧ್ಯತೆ ಇದೆ — ಇದನ್ನೇ Basis Risk ಎಂದು ಕರೆಯಲಾಗುತ್ತದೆ

PMFBY ಯೋಜನೆ 2016ರಲ್ಲಿ ಪ್ರಾರಂಭವಾದYield-based ವಿಮೆ. ರೈತರಿಗೆ ಅತ್ಯಂತ ಕಡಿಮೆ ಪ್ರೀಮಿಯಂ — ಖರಿಫ್ 2%, ರಬಿ 1.5%, ವಾಣಿಜ್ಯ ಬೆಳೆಗಳಿಗೆ 5% ಮಾತ್ರ. ಉಳಿದ ಪ್ರೀಮಿಯಂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಂಚಿಕೊಳ್ಳುತ್ತದೆ. Prevented sowing, standing crop loss, post-harvest loss, localized calamities ಮೊದಲಾದ ನಷ್ಟಗಳನ್ನು ಒಳಗೊಂಡಿರುವ ಸಮಗ್ರ ಯೋಜನೆ ಇದು. WBCIS ಎಂಬುದು 2007ರಲ್ಲಿ ಪರಿಚಯಿಸಲ್ಪಟ್ಟ ಸೂಚಕಾಧಾರಿತ ವಿಮೆ. ತೋಟಗಾರಿಕಾ ಬೆಳೆ (ಉದಾ: Arecanut), ಹವಾಮಾನಕ್ಕೆ ತುಂಬಾ ಸಂವೇದನಾಶೀಲ ಬೆಳೆ ಮುಂತಾದವುಗಳಿಗೆ ಇದು ಸೂಕ್ತ. Weather station ಡೇಟಾ ಲಭ್ಯವಾಗುವ ಕಾರಣ ಪರಿಹಾರ ವೇಗವಾಗಿ ನಿಗದಿಯಾಗುತ್ತದೆ. ಆದರೆ weather station ಮತ್ತು ರೈತರ ಹೊಲಗಳ ನಡುವಿನ ವ್ಯತ್ಯಾಸದಿಂದ ಕೆಲವರಿಗೆ ನೈಜ ನಷ್ಟವಾಗಿದ್ದರೂ ಪರಿಹಾರ ಸಿಗದೇ ಇರುವ ಸಾಧ್ಯತೆ (basis risk) ಹೆಚ್ಚಿದೆ. PMFBY ಮತ್ತು WBCIS ಎರಡೂ ಮಹತ್ವದ ವಿಮೆಗಳು ಆದರೆ ಅವುಗಳ ಉಪಯುಕ್ತತೆ ವಿಭಿನ್ನ. PMFBY ನೈಜ ಉತ್ಪಾದನಾ ನಷ್ಟಕ್ಕಾಗಿ ಸೂಕ್ತ; WBCIS ವೇಗವಾಗಿ ಪರಿಹಾರ ಬೇಕಾಗಿರುವ ಪ್ರದೇಶಗಳಿಗೆ ಮತ್ತು ಹವಾಮಾನ ಸಂವೇದನಾಶೀಲ ಬೆಳೆಗೆ ಉತ್ತಮ. ಭವಿಷ್ಯದಲ್ಲಿ ಉಪಗ್ರಹ ಚಿತ್ರಗಳು, AI ಮಾದರಿಗಳು, ದೂರ ಸಂವೇದನ ತಂತ್ರಜ್ಞಾನದ ಬಳಕೆ ಮೂಲಕ ನಷ್ಟ ಮೌಲ್ಯಮಾಪನವನ್ನು ಇನ್ನಷ್ಟು ನಿಖರ ಮತ್ತು ವೇಗವಾಗಿ ಮಾಡಬಹುದಾಗಿದೆ.

ಘೋಷಣೆ: ಈ ಲೇಖನವನ್ನು ವಿವಿಧ ಇಂಟರ್ನೆಟ್ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ರಚಿಸಲಾಗಿದೆ. ಮಾಹಿತಿಯ ನಿಖರತೆಯನ್ನು ಖಚಿತಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗಿದ್ದರೂ, ಯಾವುದೇ ತಪ್ಪುಗಳಿಗೆ ಲೇಖಕರು ಉತ್ತರದಾರರಾಗಿರುವುದಿಲ್ಲ. ಈ ಲೇಖನದ ತಯಾರಿಯಲ್ಲಿ AI ಸಾಧನಗಳನ್ನು ಬಳಸಲಾಗಿದೆ.

Thursday, August 16, 2018

ಭಾರತ ಮಾತೆಯ ಧೀಮಂತ ಪುತ್ರನಿಗೆ ನುಡಿ ನಮನ


ಅಜಾತ ಶತ್ರು, ಕವಿ ಹೃದಯಿ, ರಾಜಕೀಯ ಮುತ್ಸದ್ಧಿ, ರಾಷ್ಟ್ರವಾದಿ, ಚಿಂತಕ.... ಹೀಗೆ ಹೇಳುತ್ತಾ ಹೋದರೆ ಮುಗಿಯದ ಉಪಮೆಗಳು. ಹೌದು... ನಾನು ಬರೆಯುತ್ತಿರುವುದು ಕೋಟ್ಯಂತರ ಭಾರತೀಯರ ಹೃದಯದಲ್ಲಿ ಸ್ಥಾನ ಗಳಿಸಿ ಇಂದು ನಮ್ಮನ್ನು ಅಗಲಿರುವ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ. ಸ್ವಾತಂತ್ರ್ಯೋತ್ತರ ಭಾರತ ಕಳೆದ ಏಳು ದಶಕಗಳಲ್ಲಿ ಹಲವಾರು ನಾಯಕರನ್ನು ಕಂಡಿದೆ. ಕೆಲವು ನಾಯಕರು ತಮ್ಮ ದಿಟ್ಟ ನಿರ್ಧಾರಕ್ಕೆ ಹೆಸರುವಾಸಿಯಾದರೆ ಇನ್ನು ಕೆಲವರು ಜನಪ್ರಿಯತೆ, ಬುದ್ಧಿವಂತಿಕೆ... ಹೀಗೆ ಒಂದೊಂದು ಗುಣ ವಿಶೇಷಗಳಿಂದ ಗುರುತಿಸಿಕೊಂಡಿದ್ದರು. ಆದರೆ ಅಟಲ್ ಜಿ ಅವರು ಇವೆಲ್ಲಾ ಗುಣ ವಿಶೇಷಗಳನ್ನು ಹೊಂದಿರು ಏಕೈಕ ರಾಜಕಾರಣಿಯಾಗಿ ಭಾರತೀಯರ ಪ್ರೀತಿ ಪಾತ್ರರಾಗಿ ಬಾಳಿ ಬದುಕಿದರು. ಸ್ವಂತ ಹಿತಾಸಕ್ತಿಗಿಂತ ಪಕ್ಷ ಮುಖ್ಯ ಮತ್ತು ಪಕ್ಷಕ್ಕಿಂತ ದೇಶ ಮುಖ್ಯ ಎಂದು ಬಲವಾಗಿ ನಂಬಿದ್ದ ಅವರು ಅದರಂತೆ ನಡೆದರು ಕೂಡ. ತನ್ನ ರಾಜಕೀಯ ಜೀವನದ ಬಹುಪಾಲು ವಿರೋಧ ಪಕ್ಷದಲ್ಲಿ ಕಳೆದ ಅವರು ಸರಕಾರ ತಪ್ಪಿ ನಡೆದಾಗ ತಿದ್ದಿ ಒಳ್ಳೆಯ ಕೆಲಸವನ್ನು ಬೆಂಬಲಿಸಿ ಮಾದರಿ ವಿರೋಧಿ ನಾಯಕರು ಎಂದು ಎನಿಸಿಕೊಂಡರು. ಎಂದೂ ಅಧಿಕಾರಕ್ಕೆ ಹಂಬಲಿಸದ ಅವರು ೧೯೯೬ರಲ್ಲಿ ಸಂಸತ್ತಿನಲ್ಲಿ ವಿಶ್ವಾಸ ಮತಯಾಚನೆಯ ಸಂದರ್ಭ ಮಾಡಿದ ಭಾಷಣ ರಾಜಕೀಯ ನಾಯಕರಿಗೆ ನೀತಿ ಪಾಠ ಎಂದರೆ ತಪ್ಪಾಗದು. ಅಧಿಕಾರ ಇರಲಿ ಇಲ್ಲದಿರಲಿ ದೇಶ ಸೇವೆ ಮುಂದುವರಿಯುತ್ತದೆ, ಹಾಗೆಯೇ ಮುಂದೆ ಬರುವ ಸರಕಾರಕ್ಕೆ ರಚನಾತ್ಮಕ ವಿರೋಧ ಪಕ್ಷದ ಮೂಲಕ ಸಲಹೆಗಳನ್ನು ನೀಡುತ್ತಾ ಅಧಿಕಾರ ನಡೆಸಲು ಅನುವು ಮಾಡಿಕೊಡುತ್ತೇವೆ ಎಂದ ಮಾತು ಅವರ ಮುತ್ಸದ್ದಿತನಕ್ಕೆ ಸಾಕ್ಷಿ. ಮುಂದೆ ಅಧಿಕಾರಕ್ಕೆ ಬಂದಾಗಲೂ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಆಡಳಿತ ನಡೆಸಲು ಪ್ರಯತ್ನಿಸಿದರು. ಸ್ನೇಹಿತರನ್ನು ಬದಲಿಸಬಹುದು ಆದರೆ ನೆರೆಯವರನ್ನಲ್ಲ ಎಂಬ ಸತ್ಯವನ್ನು ಅರಿತಿದ್ದ ಅವರು ಪಾಕಿಸ್ತಾನಕ್ಕೆ ಸ್ನೇಹ ಹಸ್ತ ಚಾಚಿದರು. ಆದರೆ ಪಾಕಿಸ್ತಾನದ ವಿಶ್ವಾಸದ್ರೋಹಕ್ಕೆ ಕಾರ್ಗಿಲ್ ನಲ್ಲಿ ಸರಿಯಾದ ಉತ್ತರ ಕೊಟ್ಟು ತಾನು ಹೂವಿಗಿಂತ ಕೋಮಲನಾದರೂ ವಜ್ರಕ್ಕಿಂತ ಕಠಿಣನೂ ಆಗಬಲ್ಲೆ ಎಂದು ತೋರಿಸಿದರು. ಪಕ್ಷಾತೀತವಾಗಿ ಸ್ನೇಹಿತರನ್ನು ಹೊಂದಿದ್ದರೂ ತಾನು ನಂಬಿದ ತತ್ವಾದರ್ಶಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಅಧಿಕಾರ ಉಳಿಸಿಕೊಳ್ಳಲು ಕೇವಲ ಒಂದು ಮತದ ಕೊರತೆ ಉಂಟಾದರೂ ಅನೈತಿಕ ಮಾರ್ಗವನ್ನು ಅನುಸರಿಸದೆ ಪ್ರಜಾಪ್ರಭುತ್ವ ಕೇವಲ ಸಂಖ್ಯೆಯ ಆಟವಲ್ಲ ಎಂದು ಸಾಧಿಸಿದರು. ತಮ್ಮ ಉತ್ತಮ ಆಡಳಿತದಿಂದ ಜನಪ್ರಿಯತೆಯನ್ನು ಗಳಿಸಿದ್ದರೂ ಅವರು ೨೦೦೪ ಚುನಾವಣೆಯಲ್ಲಿ ಸೋತಿರುವುದಕ್ಕೆ ಕಾರಣ ಕಂಡುಕೊಳ್ಳುವಲ್ಲಿ ರಾಜಕೀಯ ಪಂಡಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಆದರ್ಶ ರಾಜಕಾರಣಿಯಾಗಿ ಬಾಳಿ ಬದುಕಿದ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಮೂಲಕ ಭಾರತ ಮಾತೆಯ ಧೀಮಂತ ಪುತ್ರನಿಗೆ ನುಡಿ ನಮನಗಳನ್ನು ಸಲ್ಲಿಸುತ್ತೇನೆ.